ಮುಂಡರಗಿ ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಬಿಇಒ ಗಂಗಾಧರ ಅಣ್ಣಿಗೇರಿ ಉದ್ಘಾಟಿಸಿದರು.
ಮುಂಡರಗಿ: ವಿಜ್ಞಾನವು science ಜಗತ್ತಿಗೆ ಹೊಸತನ ಕಲಿಸುತ್ತದೆ. ಸೂರ್ಯ, ಚಂದ್ರ, ನಕ್ಷತ್ರ, ಕಾಯಗಳನ್ನು ಮರೆಮಾಚುವಷ್ಟು ವಿಜ್ಞಾನ ಮುಂದುವರೆಯುತ್ತಿದೆ. ವಿಜ್ಞಾನದಿಂದ ಸದಾ ಹೊಸತನ ಕಲಿಯಬಹುದು ಎಂದು ಬಿಇಒ ಗಂಗಾಧರ ಅಣ್ಣಿಗೇರಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೂರ್ಯ, ಚಂದ್ರ, ಗ್ರಹಣ, ಹಗಲು, ರಾತ್ರಿ, ಆಕಾಶ ಕಾಯಗಳು ನಿಸರ್ಗದಲ್ಲಿ ಇದ್ದರೂ ಇವುಗಳ ಚಲನೆ ಹೇಗಾಯಿತು? ಯಾವಾಗ ಗ್ರಹಣ? ಭೂಮಿಯ ತಿರುಗುವಿಕೆ? ಇವು ಮನುಷ್ಯನನ್ನು ಇನ್ನೂ ಕುತೂಹಲಭರಿತರನ್ನಾಗಿಸಿವೆ. ವಿದ್ಯಾರ್ಥಿಗಳು ವಿಶೇಷವಾದ ಮಾಹಿತಿಯೊಂದಿಗೆ ವಿಜ್ಞಾನ ವಸ್ತು ಪ್ರದರ್ಶನ ನೀಡಿದ್ದು, ಉತ್ತಮ ಕಾರ್ಯ. ವಿದ್ಯಾರ್ಥಿಗಳು ಅತ್ಯುತ್ತಮ ವಿಜ್ಞಾನಿಯಾಗುವುದಕ್ಕೆ ಕಾರ್ಯಪ್ರವೃತರಾಗಿ ಕಲಿಕೆಯಲ್ಲಿ ತೊಡಗಬೇಕು ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇಸ್ರೋ ಚಂದ್ರಯಾಣ ಆದಿತ್ಯ ಎಲ್., ಸಾಲುಮರದ ತಿಮ್ಮಕ್ಕ ವೃಕ್ಷ ಸಂತತಿ, ವೈಜ್ಞಾನಿಕ ಸಾರಿಗೆ ನಿಯಮ, ಪವನ ವಿದ್ಯುತ್ ಶಕ್ತಿ, ಮಾನವನ ದೇಹ ರಚನಾ ಕ್ರೀಯೆ, ಕಪ್ಪತಗುಡ್ಡ ಸೇರಿ ಸುಮಾರು 380ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿಭಿನ್ನ ವಿಜ್ಞಾನ ಮಾದರಿ ಪ್ರಯೋಗಗಳನ್ನು ಪ್ರದರ್ಶಿಸಿದರು.
ನವೀನಕುಮಾರ ಎಸ್.ಬಿ. ಹಾಗೂ ಹನುಮೇಶ ನಡಕಟ್ಟಿನ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
ಶಾಲಾ ಆಡಳಿತ ಮಂಡಳಿ ಸದಸ್ಯರಾದ ಹೇಮಗಿರೀಶ ಹಾವಿನಾಳ, ಕೊಟ್ರೇಶಪ್ಪ ಅಂಗಡಿ, ಈಶ್ವರಪ್ಪ ಬೆಟಗೇರಿ, ಪ್ರಾಚಾರ್ಯ ಶರಣಕುಮಾರ ಬುಗಟಿ, ಶಾಲಾ ಶಿಕ್ಷಕರು, ಸಿಬ್ಬಂದಿ ಇತರರು ಇದ್ದರು.