ಉದ್ಯೋಗ ಖಾತ್ರಿ ಯೋಜನೆಯ ತಾಂತ್ರಿಕ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕೂಲಿಕಾರ್ಮಿಕರು (NAREGA)ಶುಕ್ರವಾರ ಪ್ರತಿಭಟನೆ ನಡೆಸಿದರು. 
ಗದಗ

NAREGA: ಖಾತ್ರಿ ಕಾಮಗಾರಿಯಲ್ಲಿ ಇದೆಂಥಾ ಕಿರಿಕಿರಿ?

ಲಕ್ಷ್ಮೇಶ್ವರ: ಉದ್ಯೋಗ ಖಾತ್ರಿ ಯೋಜನೆಯಡಿ (NAREGA) ನಡೆಯುವ ಕಾಮಗಾರಿಗಳಲ್ಲಿ ಉಂಟಾಗುವ ದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ಕೂಲಿಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮದ ಕೂಲಿ ಕಾರ್ಮಿಕರಿಗೆ ನೀಡಬೇಕಾದ ಕೆಲಸ, ಕಾಮಗಾರಿಗಳ ಪೂರ್ವ ನಿಯೋಜಿತವಾಗದೆ ಇರುವುದರಿಂದ ಕಾಮಗಾರಿಗಳು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಮುಖ್ಯವಾಗಿ ಕೂಲಿಕಾರ್ಮಿಕರ ಫೇಸ್ ಲಾಕ್ ಓಪನ್ ಆಗುತ್ತಿಲ್ಲ ಎನ್ನುವ ನೆಪವೊಡ್ಡಿ ಎಲ್ಲರಿಗೂ ಕೆಲಸ ದೊರೆಯದಂತಾಗಿದೆ. ಅದಕ್ಕಾಗಿ ಗ್ರಾ.ಪಂ.ನವರು ಕಾಮಗಾರಿ ಆರಮಭಿಸುವ ಮೊದಲೇ ಕಾಮಗಾರಿ ವಿವರಗಳನ್ನು ನಿರ್ಧರಿಸಬೇಕು. ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಕಳೆದ ವರ್ಷ ಮಳೆ ಆರಂಭವಾದ ದಿನದಿಂದ ಕಾಮಗಾರಿ ಮಾಡಲು ಪ್ರಯತ್ನಿಸಿದ್ದರು, ಅಲ್ಲದೆ  20 ದಿನ ಕೆಲಸ ಮಾಡಿದರೂ ತಾಂತ್ರಿಕ ದೋಷದ ನೆಪವೊಡ್ಡಿ ಕೆಲವೇ ದಿನಗಳ ಅರ್ಧ ಕೂಲಿಯನ್ನು ಮಾತ್ರ ಹಾಕಿದರು ಎಂದು ಆರೋಪಿದರು. 
ಇದೀಗ ಗ್ರಾಮದಲ್ಲಿ ಏಕಾಏಕಿ ಕಾಮಗಾರಿ ಆರಂಭಿಸಲಾಗಿದೆ. ಎರಡು ದಿನಗಳ ಮುಂಚೆ ಗ್ರಾಪಂ ಕಾರ್ಯಾಲಯದಲ್ಲಿ ಜಾಬ್ ಕಾರ್ಡ್ ಮಾಡಿಸಿದರೂ ಕಾಮಗಾರಿ ನಡೆಯುವ ಸ್ಥಳದಲ್ಲಿ ಫೇಸ್ ಲಾಕ್ ಓಪನ್ ಆಗದ ಕಾರಣ ಕೆಲವರು ಕೂಲಿಯಿಂದ ವಂಚಿತರಾಗುತ್ತಿದ್ದಾರೆ. ಅದಕ್ಕಾಗಿ ಈ ಕ್ರಮ ಖಂಡಿಸಿ ಕಾರ್ಮಿಕರು ಕೆಲಸ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಗ್ರಾ.ಪಂ. ಮಾಜಿ ಸದಸ್ಯ ಪ್ರವೀಣ ಸೂರಣಗಿ ಹೇಳಿದರು. 
ಈ ಕುರಿತು ಪ್ರತಿಕ್ರಿಯಿಸಿದ ಪಿಡಿಒ ಜಿ.ಎಂ. ರೋಣದ, ‘ಉದ್ಯೋಗ ಖಾತ್ರಿ ಯೋಜನೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಕಾಮಗಾರಿಗಳನ್ನು ಪೂರ್ವನಿಯೋಜಿತವಾಗಿ ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಪ್ರಕಟಣೆ ಹೊರಡಿಸಲಾಗಿದೆ. ಕೆಲವು ತಾಂತ್ರಿಕ ದೋಷದಿಂದಾಗಿ ಕೆಲವರ ಫೇಸ್‌ಲಾಕ್ ಓಪನ ಆಗಿಲ್ಲ. ಈ ಸಮಸ್ಯೆ ಪರಿಹರಿಸಿ  ನಿಯೋಜಿತ ಕಾಮಗಾರಿ ಪ್ರಾರಂಭಿಸುತ್ತೇವೆ. ಇದರಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ವಹಿಸುವ ಮಾತೇ ಇಲ್ಲ ಎಂದರು.