ಮುಂಡರಗಿ ತಾಲೂಕಿನ ಕಕ್ಕೂರು ತುಂಗಭದ್ರಾ ನದಿ ದಡದಲ್ಲಿ ನೂತನವಾಗಿ ನಿರ್ಮಾಣಗೊಂಡ ಏತ ನೀರಾವರಿ ಯೋಜನೆ ಪಂಪ್‌ಹೌಸ್ ಘಟಕ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಕ್ಕೂರು ಏತ ನೀರಾವರಿ ಯೋಜನೆ ಪುನಶ್ಚೇತನಗೊಳಿಸಲಾಗಿದೆ. ಆದರೆ, ಜಮೀನುಗಳಿಗೆ ನೀರು ಹರಿಯಲು ಬೇಕಾದ ಕಾಲುವೆಗಳನ್ನೇ ನಿರ್ಮಿಸದೇ ಇರುವ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ರೈತರದ್ದು.
1971-72ನೇ ಸಾಲಿನಲ್ಲಿ ಐದು ಗ್ರಾಮಗಳ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ 50 ಲಕ್ಷ ರೂಪಾಯಿ ವೆಚ್ಚದಲ್ಲಿ ತುಂಗಭದ್ರಾ ನದಿ ದಡದಲ್ಲಿ ಕಕ್ಕೂರು ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಮೊದಲ ಹಂತದಲ್ಲಿ ಕಕ್ಕೂರು, ಕಕ್ಕೂರು ತಾಂಡಾ, ಹೆಸರೂರು ಗ್ರಾಮ ಮತ್ತು ಎರಡನೇ ಹಂತದಲ್ಲಿ ಕಕ್ಕೂರು, ನಾಗರಹಳ್ಳಿ, ರಾಮೇನಹಳ್ಳಿ ಗ್ರಾಮ ವ್ಯಾಪ್ತಿಯ ಸುಮಾರು 3 ಸಾವಿರ ಎಕರೆ ಪ್ರದೇಶ ನೀರಾವರಿ ಕಲ್ಪಿಸಲಾಗಿತ್ತು. 15ರಿಂದ 20 ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿದ ಏತ ನೀರಾವರಿ ಯೋಜನೆ, ನಂತರದ ದಿನಗಳಲ್ಲಿ ನಿರ್ವಹಣೆ ಕೊರತೆಯಿಂದಾಗಿ ಸ್ಥಗಿತಗೊಂಡಿತ್ತು. ಯೋಜನೆ ಪುನಃ ಕಾರ್ಯನಿರ್ವಹಿಸುವಂತೆ ಮಾಡಲು ರೈತರ ಹಲವು ವರ್ಷಗಳಿಂದ ಬೇಡಿಕೆ ಇಟ್ಟು ಅನೇಕ ಬಾರಿ ಹೋರಾಟ ಮಾಡಿದ್ದರು.
ರೈತರ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಕಕ್ಕೂರು ಏತ ನೀರಾವರಿ ಯೋಜನೆ ಪುನಶ್ಚೇತನಗೊಳಿಸುವ ಸಲುವಾಗಿ 2021-22ನೇ ಸಾಲಿನಲ್ಲಿ ಯೋಜನೆಯ ಎರಡು ಹಂತದ ಕಾಮಗಾರಿಗೆ 9.50 ಕೋಟಿ ರೂಪಾಯಿ ಮಂಜೂರು ಮಾಡಿತ್ತು. 2022-23ನೇ ಸಾಲಿನಲ್ಲಿ ಪುನಶ್ಚೇತನ ಕಾಮಗಾರಿ ಆರಂಭಿಸಲಾಯಿತು. 9.50 ಕೋಟಿ ರೂ. ಅನುದಾನದಲ್ಲಿ ಪಂಪ್‌ಹೌಸ್, ಜಾಕ್‌ವೆಲ್, 210 ಎಚ್‌ಪಿ ಸಾಮರ್ಥ್ಯದ 3 ಮೋಟರ್, ಇಲೆಕ್ಟ್ರಿಕಲ್ ಕೆಲಸಗಳು, ಪೈಪ್‌ಲೈನ್ ಮತ್ತು ನೀರು ವಿತರಣೆ ಚೇಂಬರ್ ಕೆಲಸ ಮುಗಿದಿದೆ.
ಏತ ನೀರಾವರಿ ಯೋಜನೆ ನೀರು ಹರಿಸುವುದಕ್ಕೆ ಸಿದ್ಧಗೊಂಡಿದೆ. ಆದರೆ, ದಶಕಗಳ ಹಿಂದೆ ನಿರ್ಮಿಸಿದ್ದ ಕಾಲುವೆಗಳು ಹೂಳು, ಗಿಡಗಂಟಿ ಬೆಳೆದು ಮುಚ್ಚಿಕೊಂಡಿವೆ. ಅಲ್ಲಲ್ಲಿ ಮಾತ್ರ ಕಾಲುವೆ ಇದ್ದ ಗುರುತು ಕಾಣಸಿಗುತ್ತದೆ. ಏತ ನೀರಾವರಿ ಯೋಜನೆ ಸಂಪೂರ್ಣ ಕಾರ್ಯಾಚರಣೆಗೆ ಸಿದ್ಧವಾಗಿದ್ದರೂ, ನೀರು ಹರಿಯಲು ಬೇಕಾದ ಕಾಲುವೆಗಳೇ ಇಲ್ಲದಾಗಿದೆ.
ಸದ್ಯ ಮುಚ್ಚಿ ಹೋಗಿರುವ ಕಾಲುವೆಗಳ ಜಾಗದಲ್ಲಿ ಹೊಸದಾಗಿ ಕಾಲುವೆ ನಿರ್ಮಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ, ಪುನಶ್ಚೇತನಕ್ಕೆ ಖರ್ಚು ಮಾಡಿದ ಕೋಟ್ಯಂತರ ರೂಪಾಯಿ ವ್ಯರ್ಥವಾಗುವ ಜತೆಗೆ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. ಆದ್ದರಿಂದ ಸರ್ಕಾರ, ಸಣ್ಣ ನೀರಾವರಿ ಇಲಾಖೆ ಹೊಸದಾಗಿ ಕಾಲುವೆ ನಿರ್ಮಿಸಲು ಮುಂದಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.
ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಕ್ಕೂರು ಏತ ನೀರಾವರಿ ಯೋಜನೆ ಪುನಶ್ಚೇತನಗೊಳಿಸಿದೆ. ಆದರೆ, ನೀರು ಹರಿಯಲು ಕಾಲುವೆ ಇಲ್ಲದಾಗಿದೆ. ಈ ಹಿಂದೆ ನಿರ್ಮಿಸಿದ ಕಾಲುವೆಗಳು ಮುಚ್ಚಿವೆ. ಅದೇ ಜಾಗದಲ್ಲಿ ಹೊಸದಾಗಿ ಕಾಲುವೆ ನಿರ್ಮಾಣ ಮಾಡಬೇಕಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಸಚಿವರು ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಗುವುದು.
— ವೈ.ಎನ್. ಗೌಡರ ತಾಲೂಕಾಧ್ಯಕ್ಷ, ಅಭಿವೃದ್ಧಿ ಹೋರಾಟ ವೇದಿಕೆ ಮುಂಡರಗಿ
ಒಂದು ವಾರದೊಳಗೆ ಕಕ್ಕೂರು ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಕಾಲುವೆ ನಿರ್ಮಿಸುವ ಕುರಿತು ಸರ್ವೇ ಮಾಡಲಾಗುವುದು. ನಂತರ ಅಂದಾಜು ಪಟ್ಟಿ ವರದಿ ತಯಾರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರದಿಂದ ಅನುದಾನ ಬಂದ ಕೂಡಲೇ ಕಾಲುವೆ ನಿರ್ಮಿಸಿ ಯೋಜನೆ ಕಾರ್ಯಾರಂಭ ಮಾಡಲಾಗುವುದು.
— ವಿನಾಯಕ, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ ಗದಗ