ನರಗುಂದ ತಾಲೂಕಿನ ವಾಸನ ಗ್ರಾಮದಲ್ಲಿ ಬಿವಿಜಿ ವೆಲ್‌ನೆಸ್ ಸೆಂಟರ್-ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.  
ಗದಗ

Medical ವೈದ್ಯಕೀಯ ಕ್ಷೇತ್ರಕ್ಕೆ ಭಾರತದ ಕೊಡುಗೆ ದೊಡ್ಡದು

ನರಗುಂದ: ಭಾರತದ ಆಯುರ್ವೇದ ಗಿಡಮೂಲಿಕೆ ಪದ್ಧತಿಯಲ್ಲಿ ಬಹುದೊಡ್ಡ ಶಕ್ತಿ ಅಡಗಿದೆ. ಆಯುರ್ವೇದದಿಂದಾಗಿ ವೈದ್ಯಕೀಯ Medical ಕ್ಷೇತ್ರದಲ್ಲಿ ಭಾರತೀಯರು ಇಡೀ ಜಗತ್ತಿಗೆ ಬಹುದೊಡ್ಡ ಕೊಡುಗೆ ನೀಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲೂಕಿನ ವಾಸನ ಗ್ರಾಮದ ಸ್ವಯಂ ಸಂಜೀವಿನಿ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿವಿಜಿ ವೆಲ್‌ನೆಸ್ ಸೆಂಟರ್-ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಉದ್ಘಾಟನೆ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.
ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವುದಲ್ಲದೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನ ಕಾಪಾಡಿಕೊಂಡು ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತದೆ. ಇದಕ್ಕೆ ಬಹಳಷ್ಟು ಇತಿಹಾಸದ ಮಹತ್ವವಿದೆ. ಇಡೀ ಜಗತ್ತಿಗೆ ಶೂನ್ಯದ ಕಲ್ಪನೆ ಕೊಟ್ಟವರು ಭಾರತೀಯರು. ಆದರೆ, ಇಸ್ಲಾಮಿಕ್, ಬ್ರಿಟಿಷರ ಪ್ರಭಾವದಿಂದಾಗಿ ವೈದ್ಯಕೀಯ ಕ್ಷೇತ್ರ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಭಾರತೀಯರಿಗೆ ಇದು ನಮ್ಮದಲ್ಲ ಎಂಬ ನಂಬಿಕೆಗಳನ್ನು ಕಳೆದುಕೊಂಡಿದ್ದೇವೆ ಎಂದರು.
ಬಿವಿಜಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹನುಮಂತರಾವ್ ಗಾಯಕವಾಡ ಮಾತನಾಡಿ, ಬಿವಿಜಿ ಇಂಡಿಯಾ ಲಿಮಿಟೆಡ್ ಭಾರತದ ಅತಿ ದೊಡ್ಡ ಸಮಗ್ರ ಸೇವೆಗಳು ಮತ್ತು ಸೌಲಭ್ಯ ನಿರ್ವಹಣಾ ಕಂಪನಿಗಳಲ್ಲಿ ಒಂದಾಗಿದೆ. ದೇಶ- ವಿದೇಶಗಳಲ್ಲೂ ವ್ಯಾಪಕ ಶ್ರೇಣಿಯ ಹೊರಗುತ್ತಿಗೆ ಸೇವೆಗಳನ್ನು ನೀಡುವಲ್ಲಿ ಬಿವಿಜಿ ಮುಂಚೂಣಿಯಲ್ಲಿದೆ. ಬಿವಿಜಿ ಲೈಫ್ ಸೈನ್ಸಸ್ ಸಂಸ್ಥೆ ಬಹಳಷ್ಟು ಸಂಶೋಧನೆಗಳ ಮೂಲಕ ಪಾರಂಪರಿಕ ವೈದ್ಯಕೀಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಎಂದರು.
ಪಾರಂಪರಿಕ ವೈದ್ಯ ಡಾ.ಹನುಮಂತ ಮಳಲಿ ಮಾತನಾಡಿ, ಗಿಡಮೂಲಿಕೆಗಳು, ಪಂಚಕರ್ಮ, ಯೋಗ ಮತ್ತು ನ್ಯೂಟ್ರಾಸ್ಯುಟಿಕಲ್ ಉತ್ಪನ್ನಗಳ ರೂಪದಲ್ಲಿ ಜಾಗತಿಕವಾಗಿ ವಿಸ್ತರಿಸಿದ್ದು, ಬಿವಿಜಿ ಲೈಫ್ ಸೈನ್ಸಸ್ ಸಂಸ್ಥೆಯು ನಮ್ಮೊಂದಿಗೆ ಕ್ಯಾನ್ಸರ್ ಔಷಧಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡು ಚಿಕಿತ್ಸಾ ಕೇಂದ್ರ ಆರಂಭಿಸಿದೆ ಎಂದರು.
ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೇರಳದ ಮಹಾಪೀಠಂ ಮಠದ ಶ್ರೀ ಸಹಸ್ರಾರ ಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಕರ್ನಾಟಕ ಹೈಕೋರ್ಟ್ ನ್ಯಾ. ಹಂಚಾಟೆ ಸಂಜೀವಕುಮಾರ, ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡಿದರು. ಶಾಸಕ ಸಿ.ಸಿ. ಪಾಟೀಲ, ಡಾ. ಜಯಶ್ರೀ ದ್ರಾವಿಡ, ಅರುಣಕುಮಾರ್, ಡಾ.ವಿದ್ಯಾ, ಡಾ.ರವಿಕುಮಾರ, ಬಿವಿಜಿ ಲೈಫ್ ಸೈನ್ಸಸ್ ಲಿಮಿಟೆಡ್‌ನ ದಕ್ಷಿಣ ಭಾರತ ಸಂಯೋಜಕ ಸಂಜಯ್ ಡೋಂಗರೆ, ಜಗದೀಶ ಗೊಂಡಬಾಳ, ಮುತ್ತಣ್ಣ ತಿರ್ಲಾಪೂರ, ಶಿವಪ್ರಕಾಶ ಹೊಸಕೇರಿಮಠ, ದಿನೇಶ ಶೆಟ್ಟಿ, ಉಪಸ್ಥಿತರಿದ್ದರು. ಆರ್.ಜಿ. ರಶೀದ ನಿರ್ವಹಿಸಿದರು.