ರೋಣದ ಪಂಡಿತ ಭೀಮಸೇನ ಜೋಶಿ ತಾಲೂಕು ಆಸ್ಪತ್ರೆ.
ರೋಣ/ಗಜೇಂದ್ರಗಡ: ರೋಣ ಹಾಗೂ ಗಜೇಂದ್ರಗಡ ಅವಳಿ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ವೈದ್ಯಕೀಯ ಸೇವೆ ತೀರಾ ಹದಗೆಟ್ಟಿದೆ. ಮುಖ್ಯವಾಗಿ ರೋಣ ತಾಲೂಕು ಆಸ್ಪತ್ರೆ ಹಾಗೂ ಗಜೇಂದ್ರಗಡದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಜೇರಿಯನ್ ಮಾಡುವ ವೈದ್ಯರಿಲ್ಲ. ಜತೆಗೆ ಅರವಳಿಕೆ ತಜ್ಞರೂ ಇಲ್ಲದ ಕಾರಣ ಬಾಣಂತಿಯರು ಸಂಕಷ್ಟ ಅನುಭವಿಸುತ್ತಿದ್ದಾರೆ.
ರೋಣ ತಾಲೂಕು ಆಸ್ಪತ್ರೆಯಲ್ಲಿ ಈ ಮೊದಲು ಸಿಜೇರಿಯನ್‌ಗಳು ನಡೆಯುತ್ತಿದ್ದವು. ಆದರೆ, ಕಳೆದ ಎರಡ್ಮೂರು ತಿಂಗಳಿಂದ ಅರವಳಿಕೆ ತಜ್ಞರು ರಜೆ ಮೇಲೆ ತೆರಳಿದ ಪರಿಣಾಮ ಅಂದಿನಿಂದ ಸಿಜೇರಿಯನ್ ಹೆರಿಗೆ ಮಾಡುತ್ತಿಲ್ಲ. ಇನ್ನು ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಸಿಜೇರಿಯನ್ ಶಸ್ತ್ರಚಿಕಿತ್ಸೆ ನಡೆದಿದ್ದವು. ಆದರೆ, ಪಟ್ಟಣದ ಸಾರ್ವಜನಿಕರು ವೈದ್ಯರಿಗೆ ಸಹಕಾರ ನೀಡದ ಕಾರಣ ಅವರು ಇಲ್ಲಿಯ ಸಹವಾಸವೇ ಬೇಡ ಎಂದು ರಾಜೀನಾಮೆ ನೀಡಿ ತೆರಳಿದ್ದರು. ಅಂದಿನಿಂದ ಇಂದಿನವರೆಗೂ ಯಾವ ಶಸ್ತ್ರಚಿಕಿತ್ಸೆಯೂ ನಡೆದಿಲ್ಲ.
ಪಕ್ಕದ ತಾಲೂಕಿನ ಮೇಲೆ ಅವಲಂಬನೆ: ರೋಣ ಮತಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗಿದ್ದು, ರೋಣ ಹಾಗೂ ಗಜೇಂದ್ರಗಡ ಪಟ್ಟಣಗಳು ಶರವೇಗದಲ್ಲಿ ಬೆಳೆಯುತ್ತಿವೆ. ಅಷ್ಟೇ ವೇಗವಾಗಿ ವೈದ್ಯಕೀಯ ಸೇವೆ ಸಿಗಬೇಕಿತ್ತು. ಆದರೆ, ಅದು ಸಿಗುತ್ತಿಲ್ಲ. ಬಾಣಂತಿಯರು ಸಿಜೇರಿಯನ್ ಮೂಲಕ ಡಿಲೇವರಿ ಮಾಡಿಸಿಕೊಳ್ಳಬೇಕೆಂದರೆ ಪಕ್ಕದ ಕುಷ್ಟಗಿ, ಯಲಬುರ್ಗಾ ಇಲ್ಲವೇ ಗದಗ ಜಿಲ್ಲಾಸ್ಪತ್ರೆಗೆ ತೆರಳಬೇಕು. ಗಜೇಂದ್ರಗಡ ಹಾಗೂ ರೋಣ ತಾಲೂಕಿನ ಬಾಣಂತಿಯರು ಚಿಕಿತ್ಸೆಗೆ ಕುಷ್ಟಗಿಗೆ ತೆರಳಿದರೆ, ಅಲ್ಲಿಂದ ಏಕೆ ಇಲ್ಲಿಗೆ ಬರುತ್ತಿರಿ. ನಿಮ್ಮಲ್ಲಿ ಸೌಲಭ್ಯ ಇಲ್ಲವೇ ಎಂಬ ಚುಚ್ಚು ಮಾತು ವೈದ್ಯಕೀಯ ಸಿಬ್ಬಂದಿಯಿಂದ ಕೇಳಿಬರುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯೂ ಬಂದ್: ಮಕ್ಕಳು ಸಾಕು ಎಂದು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗುವ ಮಹಿಳೆಯರಿಗೂ ಇದರಿಂದ ತೊಂದರೆಯಾಗಿದೆ. ಏಕೆಂದರೆ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಮುಖ್ಯವಾಗಿ ಅರವಳಿಕೆ ಕೊಟ್ಟ ನಂತರವೇ ಚಿಕಿತ್ಸೆ ಮುಂದುವರಿಯುತ್ತದೆ. ಹೀಗಾಗಿ ಎರಡೂ ತಾಲೂಕುಗಳಲ್ಲಿ ಅರವಳಿಕೆ ತಜ್ಞರ ಕೊರತೆ ಇದೆ. ಹೀಗಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯೂ ಇಲ್ಲವಾಗಿದೆ.
ಈ ಮೊದಲು ನಮ್ಮಲ್ಲಿ ಸಿಜೇರಿಯನ್ ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೇವು. ಆದರೆ, ಈಗ ಅರವಳಿಕೆ ತಜ್ಞರು ಇಲ್ಲದ ಕಾರಣ ಬಂದ್ ಮಾಡಿದ್ದೇವೆ. ಮೊದಲದಿದ್ದವರು ರಜೆ ಮೇಲೆ ತೆರಳಿದ್ದರಿಂದ ಸಮಸ್ಯೆಯಾಗಿದೆ. ಶೀಘ್ರ ಅವರು ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಲಿದ್ದು, ಮತ್ತೆ ನಮ್ಮ ಆಸ್ಪತ್ರೆಯಲ್ಲೂ ಸಿಜೇರಿಯನ್ ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಆರಂಭಿಸಲಾಗುವುದು.
ಅರವಳಿಕೆ ತಜ್ಞರ ಕೊರತೆ ತೀವ್ರವಾಗಿದೆ. ಈ ಹಿಂದೆ ಕಾರವಾರದಿಂದ ಅರವಳಿಕೆ ವೈದ್ಯರೊಬ್ಬರು ಬಂದು ಸೇವೆ ಸಲ್ಲಿಸುತ್ತಿದ್ದರು. ಆದರೆ, ಸಾರ್ವಜನಿಕರು ಅವರೊಂದಿಗೆ ಬಂದು ಜಗಳವಾಡುವುದು, ಸೌಜನ್ಯದಿಂದ ವರ್ತಿಸದಿರುವುದರಿಂದ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ತೆರಳಿದ್ದಾರೆ. ಮತ್ತೆ ಯಾರಾದರೂ ಬಂದು ಹಾಜರಾದರೆ ನಾವು ಸಿಜೇರಿಯನ್ ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮುಂದುವರಿಸುತ್ತೇವೆ.