ನರೇಗಲ್ಲ ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 
ಗದಗ

TALENT ಪ್ರತಿಭಾವಂತರ ಸನ್ಮಾನ ಪುಣ್ಯದ ಕಾರ್ಯ

ರವಿ ಎಸ್. ಬಳೂಟಗಿ
ನರೇಗಲ್ಲ: ಪ್ರತಿಭಾವಂತರನ್ನು ಗುರುತಿಸಿ (TALENT) ಸನ್ಮಾನಿಸುವುದು ಪುಣ್ಯದ ಕೆಲಸ. ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಅಂತಹ ಪುಣ್ಯದ ಕಾರ್ಯ ನೆರವೇರಿಸಲಾಗಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸವಿತಕ್ಕ ಹೇಳಿದರು.
ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು.
ಪರೀಕ್ಷೆ ಹಬ್ಬವಿದ್ದಂತೆ. ಅದನ್ನು ಸಮರ್ಥವಾಗಿ ಎದುರಿಸಿದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪ್ರತಿಭಾವಂತರೆನ್ನಿಸಿಕೊಳ್ಳುತ್ತಾರೆ. ಅಂತಹ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನ ಮಾಡಿದ್ದು ನಿಜಕ್ಕೂ ಶಿವನಿಗೆ ಪ್ರಿಯವಾಗಿದೆ. ಇಂತಹ ಉತ್ತಮ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಆಶೀರ್ವಾದ ದೊರಕುತ್ತದೆ ಎಂದರು. ಎಸ್.ಎ. ಬಾಲಕರ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಬಿ. ಸಜ್ಜನ ಮಾತನಾಡಿ, ಬಹಳಷ್ಟು ಅಂಕ ಗಳಿಸಿದವರನ್ನು ಕರೆದು ಸನ್ಮಾನಿಸುವುದು ಸಾಗಿ ಬಂದ ಸಂಪ್ರದಾಯ. ಆದರೆ, ಸಂಚಾಲಕಿ ಸವಿತಕ್ಕ ಅವರು ವಿಶೇಷ ಗಮನ ಹರಿಸಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕರೆದು ಸನ್ಮಾನಿಸಿದ್ದು ಶ್ಲಾಘನೀಯ. ಇದನ್ನು ಗಮನಿಸಿ ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿ ಬಂದು ಸನ್ಮಾನ ಸ್ವೀಕರಿಸುವಂತಾಗಬೇಕೆಂದರು.
ಶಿಕ್ಷಕ ಎಂ.ವಿ. ಬಿಂಗಿ, ಉಪನ್ಯಾಸಕ ಶಿವಾನಂದ ಗೋಗೇರಿ ಮಾತನಾಡಿದರು. ಶಿಕ್ಷಕ ಮಹಾದೇವಪ್ಪ ಬೇವಿನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ 21 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.