ಆದಿತ್ಯ 
ಗದಗ

‘ರಂಗಪಂಚಮಿ’ ಸ್ನಾನ ಮಾಡಲು ಹೋಗಿ ವಿದ್ಯಾರ್ಥಿ ಸಾವು

ಮಂಜುನಾಥ ಗದಗಿನ
ಗದಗ: ರಂಗಪಂಚಮಿ ಸಂಭ್ರಮದ ನಂತರ ಸ್ನಾನ ಮಾಡಲು ಹೋದ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕಣಗಿನಹಾಳ ರಸ್ತೆಯ ಜಮೀನೊಂದರಲ್ಲಿ ಶನಿವಾರ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ, ಗದಗಿನ ಜಿಮ್ಸ್ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಆದಿತ್ಯ (24) ಮೃತ ವಿದ್ಯಾರ್ಥಿ.
ಘಟನೆಯ ಹಿನ್ನೆಲೆ: ಶನಿವಾರ ಗದಗ ನಗರದಲ್ಲಿ ಗೆಳೆಯರೊಂದಿಗೆ ರಂಗಪಂಚಮಿ ಬಣ್ಣದಾಟ ಆಡಿದ್ದಾನೆ. ನಂತರ ಗೆಳೆಯರೊಂದಿಗೆ ಸ್ನಾನ ಮಾಡಲು ಲಕ್ಕುಂಡಿಯಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಮುಲ್ಲಾನ ಹಳ್ಳದ ಸಮೀಪದ ಜಮೀನಿಗೆ ತೆರಳಿದ್ದನು. ಅಲ್ಲಿ ಗಣಿಗಾರಿಕೆಯಿಂದ ಸೃಷ್ಟಿಯಾಗಿದ್ದ ಸುಮಾರು 20 ಅಡಿ ಆಳದ ಮಳೆನೀರು ತುಂಬಿದ ಹೊಂಡಕ್ಕೆ ಈಜಲು ಇಳಿದಿದ್ದಾನೆ. ನೀರಿನ ಆಳದ ಅರಿವಿಲ್ಲದೆ ಹೊಂಡದ ಸುಳಿಗೆ ಸಿಲುಕಿ ಮುಳುಗಿದ್ದಾನೆ.
ಶವ ಪತ್ತೆ: ತಕ್ಷಣ ಗೆಳೆಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶನಿವಾರ ಸಂಜೆಯೇ ಶೋಧ ಕಾರ್ಯ ಆರಂಭಿಸಿದ್ದರು. ಆದರೆ, ಬೆಳಕಿನ ಅಭಾವದಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಮತ್ತೆ ಕಾರ್ಯಾಚರಣೆ ಮುಂದುವರಿಸಿದ ಸಿಬ್ಬಂದಿ ಆದಿತ್ಯನ ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.