Hindu ಲಕ್ಷ್ಮೇಶ್ವರದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಮ್ಮಿಕೊಂಡಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ಶರತಕುಮಾರ ಉದ್ಘಾಟಿಸಿದರು 
ಗದಗ

Hindu ಹಿಂದೂ ಸಮಾಜ ವಿಭಜಿಸಲು ಷಡ್ಯಂತ್ರ

ಲಕ್ಷ್ಮೇಶ್ವರ: ರಾಷ್ಟ್ರ ಪುರುಷರ ಹೆಸರಿನಲ್ಲಿ ಗುಂಪುಗಳನ್ನು ರಚಿಸುವ ಮೂಲಕ ಹಿಂದೂ (Hindu) ಸಮಾಜ ಒಡೆಯುವ ಷಡ್ಯಂತ್ರವನ್ನು ಸಮಾಜಘಾತುಕ ಶಕ್ತಿಗಳು ಮಾಡುತ್ತಿವೆ. ಇದನ್ನು ತಡೆಯುವ ಕಾರ್ಯ ಆಗಬೇಕಾಗಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿ ಸಮನ್ವಯಕಾರ ಶರತಕುಮಾರ ಹೇಳಿದರು.
ಪಟ್ಟಣದ ಶ್ರೀ ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿ, ಹಿಂದೂಗಳಲ್ಲಿ ಧಾರ್ಮಿಕ ಶಿಕ್ಷಣದ ಕೊರತೆ ಇರುವದರಿಂದ ಜಾಗೃತಿ ಮೂಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವಶಕ್ತಿ ದುಶ್ಚಟಗಳ ದಾಸರಾಗಿದ್ದು, ಅವರಿಗೆ ಧರ್ಮದ ಬಗ್ಗೆ ತಿಳಿದುಕೊಳ್ಳಲು ಸಮಯವಿಲ್ಲ. ಹಿಂದೂ ಸಮಾಜದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಬೆಳೆಯುತ್ತಿದೆ. ಶಿಕ್ಷಣದ ಅಭಾವದಿಂದ ಸಮಾಜದ ಆಚರಣೆ ಸಂಸ್ಕೃತಿ ಪರಂಪರೆ ರಾಷ್ಟ್ರ ಭಕ್ತಿ ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಲವ್ ಜಿಹಾದ್, ಮತಾಂತರ, ದ್ವೇಷ ಭಾಷಣ ಕಾಯ್ದೆ, ಹಿಂದೂಗಳ ಬಂಧನ, ಜನಸಂಖ್ಯಾ ಸ್ಫೋಟ ಮತ್ತು ವಕ್ಫ್ ಕಾಯ್ದೆ ಮೊದಲಾದ ಗಂಭೀರ ಸವಾಲುಗಳನ್ನು ಎದುರಿಸಲು ಭಾರತವನ್ನು ಸಂವಿಧಾನಬದ್ಧ ’ಹಿಂದೂ ರಾಷ್ಟ್ರ’ವಾಗಿ ಘೋಷಿಸುವ ಅನಿವಾರ್ಯವಿದೆ ಎಂದು ಪ್ರತಿಪಾದಿಸಿದರು.
ಹಿಂದೂಗಳು ಜಾತಿ- ಪಂಥ ಮರೆತು ಸಂಘಟಿತರಾಗಬೇಕು. ಕೇವಲ ಭಾಷಣಕ್ಕೆ ಸೀಮಿತವಾಗದೆ, ಪ್ರತಿದಿನ ಒಂದು ಗಂಟೆ ಧರ್ಮ ಕಾರ್ಯಕ್ಕಾಗಿ ಸಮಯ ಮೀಸಲಿಡಿ ಎಂದ ಅವರು, ದೇಶದಲ್ಲಿ 100 ಕೋಟಿ ಹಿಂದೂಗಳಿದ್ದರೂ ಹಿಂದೂ ರಾಷ್ಟ್ರ ನಿರ್ಮಾಣ ಆಗುತಿಲ್ಲ. ಹೀಗಾಗಿ ಹಿಂದೂಗಳು ರಾಷ್ಟ್ರ ಸ್ಥಾಪನೆಗೆ ಬದ್ಧರಾಗಿ ನಿಲ್ಲಬೇಕು. ಹಿಂದೂಗಳಲ್ಲಿ ಧರ್ಮ ಜಾಗೃತಿ ಮೂಡಬೇಕಾಗಿದೆ ಎಂದರು.
ಹಳಿಯಾಳದ ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀಪತಿ ಭಟ್ ಮಾತನಾಡಿ, ಬಹುಸಂಖ್ಯಾತರಾಗಿದ್ದ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಇದಕ್ಕೆ ಹಿಂದೂಗಳೇ ಕಾರಣ. ಸ್ವಾರ್ಥ ಸಾಧನೆಗಾಗಿ ಧರ್ಮದ ವಿಚಾರ ಮಾಡದೆ ಜೀವನವನ್ನು ಸಾಗಿಸಿಕೊಂಡು ಬರುತ್ತಿರುವುದರಿಂದ ಧರ್ಮದ ವಿಸ್ತಾರ ಕುಂಠಿತಗೊಳ್ಳುತ್ತಿದೆ ಎಂದು ಹೇಳಿದರು.