ಶಿರಹಟ್ಟಿಯ ನವಗರದ ಓಂ ಶಾಂತಿ ದೇವಾಲಯ ಮುಂದೆ ವಿದ್ಯುತ್ ಕಂಬ ಉರುಳಿ ಬಿದ್ದಿರುವುದು. 
ಗದಗ

Rain: ಭಾರಿ ಗಾಳಿ ಮಳೆಗೆ ನಲುಗಿದ ಬದುಕು

ಮಂಜುನಾಥ ಗದಗಿನ
ಶಿರಹಟ್ಟಿ: ಪಟ್ಟಣದಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ (Havy Rain) ಪಟ್ಟಣದ ಹಲವೆಡೆ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಸಾರ್ವಜನಿಕ ಆಸ್ತಿ, ಪಾಸ್ತಿಗೆ ಭಾರಿ ಹಾನಿಯಾಗಿದೆ.
ಭಾನುವಾರ ಪಟ್ಟಣದ ಸಂತೆ ದಿನವಾಗಿದ್ದರಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ವಾಲ್ಮೀಕಿ ವೃತ್ತದ ಬಳಿ ನೂರಾರು ವ್ಯಾಪಾರಸ್ಥರು ಕಾಯಿಪಲ್ಲೆ ಮಾಡುತ್ತಿದ್ದರು. ಆದರೆ, ಸಂಜೆ 5 ಗಂಟೆಯ ಸುಮಾರಿಗೆ ಏಕಾಏಕಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ವ್ಯಾಪಾರಸ್ಥರು ಅಂಗಡಿಗಳಿಗೆ ಕಟ್ಟಿದ್ದ ತಾಡಪತ್ರೆಗಳು ಹಾರಿಹೋದವು. ರಸ್ತೆಯುದ್ದಕ್ಕೂ ಮಳೆ ನೀರು ನದಿಯಂತೆ ಹರಿದಿದ್ದರಿಂದ ವ್ಯಾಪಾರಿಗಳು ಮಾರಾಟಕ್ಕಿಟ್ಟಿದ್ದ ಕಾಯಿಪಲ್ಲೆಗಳು ಚರಂಡಿ ಪಾಲಾಗಿವೆ.
ಬಿರುಗಾಳಿಯ ತೀವ್ರತೆಗೆ ಪಟ್ಟಣದ ಕುಂಬಾರ ಓಣಿಯ ಶಿಕ್ಷಣ ಸಮಿತಿ ಪ್ರಾಥಮಿಕ ಶಾಲೆಯ ಹತ್ತಿರದ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಯ ಮೇಲೆ ಬಿದ್ದವು. ಇನ್ನು ನವನಗರದ ಓಂ ಶಾಂತಿ ಕೇಂದ್ರದ ಬಳಿ ಗಾಳಿಯ ವೇಗಕ್ಕೆ ವಿದ್ಯುತ್ ಕಂಬಗಳು ನೆಲಸಮವಾಗಿವೆ. ಪಟ್ಟಣದ ಹಲವು ವಾರ್ಡ್‌ಗಳಲ್ಲೂ ಗಿಡ-ಗಂಟೆಗಳು ಮುರಿದು ಬಿದ್ದಿವೆ.
ಕತ್ತಲಲ್ಲಿ ಮುಳುಗಿದ ಶಿರಹಟ್ಟಿ: ಸಂಜೆ 5 ಗಂಟೆಗೆ ಆರಂಭವಾದ ಮಳೆಯಿಂದಾಗಿ ಪಟ್ಟಣದಾದ್ಯಂತ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ರಾತ್ರಿ 12 ಗಂಟೆಯಾದರೂ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಯಿತು.
ಪ್ರಸಿದ್ಧ ಶ್ರೀ ಫಕ್ಕಿರೇಶ್ವರ ಮಠದ ಆವರಣದಲ್ಲಿ ಜಾತ್ರೆ ನಿಮಿತ್ತ ಹಾಕಲಾಗಿದ್ದ ನೂರಾರು ಅಂಗಡಿ-ಮುಂಗ್ಗಟ್ಟುಗಳು ಗಾಳಿ-ಮಳೆಯ ರಭಸಕ್ಕೆ ತೂರಿ ಹೋಗಿವೆ. ರಾತ್ರಿ ಇಡೀ ಸುರಿದ ಮಳೆಗೆ ಅಂಗಡಿಯಲ್ಲಿದ್ದ ಸಾಮಗ್ರಿಗಳು ನೆನೆದಿವೆ. ಕರಾವಳಿ ಮತ್ತು ಬಯಲು ಸೀಮೆಯಿಂದ ಬಂದಿದ್ದ ಸಣ್ಣ ಪುಟ್ಟ ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಕಣ್ಣೀರು ಹಾಕುತ್ತಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಹಾಗೂ ಪುರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.