ಗಜೇಂದ್ರಗಡ ಪಟ್ಟಣದ ಶಾಲೆಯೊಂದರಲ್ಲಿ ಶೂ ಹಾಕದೆ ಕೆಲವು ಮಕ್ಕಳು ಬರಿ ಗಾಲಿನಲ್ಲಿ ಇನ್ನೂ ಕೆಲವು ಮಕ್ಕಳು ಚಪ್ಪಲಿ ಧರಿಸಿರುವುದು. 
ಗದಗ

govt school: ಎರಡು ತಿಂಗಳಾದ್ರೂ ಬಾರದ ಶೂ-ಸಾಕ್ಸ್ !

ಮಂಜುನಾಥ ಗದಗಿನ
ಮಂಜುನಾಥ ಕುದರಿಕೋಟಿ ಗಜೇಂದ್ರಗಡ
ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆಯುತ್ತಿದ್ದರೂ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಮಾಡಿಲ್ಲ. ಇದರಿಂದ ಸರ್ಕಾರಿ ಶಾಲೆಯ ಮಕ್ಕಳು ಬರಿಗಾಲಲ್ಲೇ ಶಾಲೆಗಳತ್ತ ಹೆಜ್ಜೆ ಹಾಕುವಂತಾಗಿದೆ.
ತಾಲೂಕಿನಲ್ಲಿ ಒಟ್ಟು ಅನುದಾನಿತ ಶಾಲೆಗಳನ್ನು ಸೇರಿಸಿ 178 ಶಾಲೆಗಳಿವೆ. ಅದರಲ್ಲಿ 31 ಪ್ರೌಢಶಾಲೆ ಹಾಗೂ 147 ಪ್ರಾಥಮಿಕ ಶಾಲೆಗಳನ್ನು ಗಜೇಂದ್ರಗಡ ತಾಲೂಕು ಹೊಂದಿದೆ. ಮಕ್ಕಳಿಗೆ ಜೂ.1ರಂದು ಸಂಭ್ರಮದ ಸ್ವಾಗತ ಕೋರಲಾಯಿತು. ಅಂದು ಸಮವಸ್ತ್ರ, ಪಠ್ಯಪುಸ್ತಕ ಮೊದಲಾದ ಪರಿಕರ ವಿತರಿಸಿ ಶಾಲೆ ಆರಂಭ ಮಾಡಲಾಯಿತು. ಆದರೆ, ಇನ್ನೂವರೆಗೂ ಶೂ-ಸಾಕ್ಸ್ ವಿತರಣೆ ಮಾಡಿಲ್ಲ.
ಒಂದು ಜತೆ ಶೂ, 2 ಸಾಕ್ಸ್: ಸರ್ಕಾರದ ನಿಯಮದ ಪ್ರಕಾರ, ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಜತೆ ಶೂ ಹಾಗೂ 2 ಜತೆ ಸಾಕ್ಸ್‌ಗಳನ್ನು ಕೊಡಲಾಗುತ್ತದೆ. ಅದರಂತೆ ತಾಲೂಕಿನ ಎಲ್ಲ ಶಾಲೆಯ ಮುಖ್ಯ ಶಿಕ್ಷಕರು ಮಕ್ಕಳ ಒಟ್ಟು ಹಾಜರಾತಿ ಸಂಖ್ಯೆಯನ್ನು ಸಂಬಂಧ ಪಟ್ಟಿರುವ ಇಲಾಖೆಗಳಿಗೆ ಮಾಹಿತಿ ನೀಡಿ ಬೇಡಿಕೆ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಬಂದಿಲ್ಲ.
ಕಡು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ, ಶಾಲೆಗಳತ್ತ ಅವರನ್ನು ಸೆಳೆಯುವ ಉದ್ದೇಶದಿಂದ ಸರ್ಕಾರವು ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಇದೇ ಉದ್ದೇಶದಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಮಾಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ, ಕೆಲವು ಹಳ್ಳಿಗಳ ಮಕ್ಕಳು ಶಾಲೆಗೆ ಹೋಗಿ ಬರಬೇಕೆಂದರೆ ಕಿ.ಮೀ.ಗಟ್ಟಲೆ ನಡೆದುಕೊಂಡೆ ಹೋಗಬೇಕಾದ ಸ್ಥಿತಿ ಇದೆ. ಎಲ್ಲ ಕಡೆಗಳಲ್ಲೂ ಕೆಎಸ್‌ಆರ್‌ಟಿಸಿ ಬಸ್ ಅಥವಾ ಸಾರಿಗೆಯ ವ್ಯವಸ್ಥೆ ಇರುವುದಿಲ್ಲ. ಹೀಗೆ ನಡೆದುಕೊಂಡು ಹೋಗುವ ಮಕ್ಕಳಿಗೆ ಶೂ, ಸಾಕ್ಸ್ ಸಕಾಲಕ್ಕೆ ದೊರೆತರೆ ಅನುಕೂಲ ಆಗುತ್ತದೆ. ಸರ್ಕಾರದ ವಿಳಂಬ ಧೋರಣೆಗೆ ಪೋಷಕರು ಹಾಗೂ ಪ್ರಜ್ಞಾವಂತ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ.
ಶಿಕ್ಷಣ ಇಲಾಖೆಯಿಂದ ಖರೀದಿ: ಶೂ-ಸಾಕ್ಸ್ ಖರೀದಿ ಮಾಡಲು ಶಿಕ್ಷಣ ಇಲಾಖೆಯವರು ಎಲ್ಲ ವಿದ್ಯಾರ್ಥಿಗಳ ಕಾಲಿನ ಅಳತೆ ತೆಗೆದುಕೊಂಡು ಹೋಗಿದ್ದಾರೆ. ಈ ಹಿಂದೆ ಮಕ್ಕಳ ಸಂಖ್ಯೆಯ ಮಾಹಿತಿ ತೆಗೆದುಕೊಂಡು ಶಾಲೆಯ ಖಾತೆಗೆ ಹಣ ಭರಿಸುತ್ತಿದ್ದರು. ಶಾಲೆಯ ಆಡಳಿತ ಶೂ-ಸಾಕ್ಸ್ ಖರೀದಿಸಿ ಮಕ್ಕಳಿಗೆ ನೀಡುತ್ತಿದ್ದೆವು. ಆದರೆ, ಈ ಬಾರಿ ಇದರ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ತೆಗೆದುಕೊಂಡಿದೆ ಎಂದು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದರು.
"

ಇಷ್ಟೋಗಾಗಲೇ ಶೂ-ಸಾಕ್ಸ್ ವಿತರಣೆ ಮಾಡಬೇಕಿತ್ತು. ಸ್ವಲ್ಪ ತಡವಾಗಿದೆ. ಟೆಂಡರ್‌ದಾರರು ನೇರವಾಗಿ ಶಾಲೆಗಳಿಗೆ ಶೂ- ಸಾಕ್ಸ್‌ಗಳನ್ನು ವಿತರಣೆ ಮಾಡುತ್ತಾರೆ. ಈ ವಾರದೊಳಗೆ ಎಲ್ಲ ಶಾಲೆಗಳಿಗೂ ವಿತರಿಸಲಾಗುವುದು.

— ದಯಾನಂರ ಯಾವಗಲ್, ಕ್ಷೇತ್ರ ಶಿಕ್ಷಣಾಧಿಕಾರಿ, ರೋಣ