polytechnic ರೋಣದ ಮುದೇನಗುಡಿ ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಕಾರ್ಯಾರಂಭ ಕಾರ್ಯಕ್ರವವನ್ನು ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸಿದರು.  
ಗದಗ

Polytechnic ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಕಾರ್ಯಾರಂಭ

ರವಿ ಎಸ್. ಬಳೂಟಗಿ
ರೋಣ: ಪಟ್ಟಣಕ್ಕೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಮಂಜೂರಾಗಿ (Polytechnic ) ಕಟ್ಟಡವೂ ನಿರ್ಮಾಣವಾಗಿತ್ತು. ಆದರೆ, ರಾಜಕೀಯ ಕಾರಣಗಳಿಗೆ ಆ ಕಾಲೇಜ್ ರಾಮನಗರ ಜಿಲ್ಲೆಯ ಮಾಗಡಿಗೆ ಸ್ಥಳಾಂತರವಾಗಿತ್ತು. ನಮ್ಮ ಸರ್ಕಾರ ಹೊಸ ಕಾಲೇಜು ಮಂಜೂರು ಮಾಡಿಸಿದ್ದು, ಈಗ ಕಾರ್ಯಾರಂಭ ಮಾಡಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸೋಮವಾರ ಮುದೇನಗುಡಿ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಆರಂಭದ ಜತೆಗೆ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾಲ್ಕು ವರ್ಷದ ಹಿಂದೆ ಕಟ್ಟಡಕ್ಕೆ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಕೆಲ ಕಿಡಿಗೇಡಿಗಳು ಕಿಟಕಿಗೆ ಕಲ್ಲು ಎಸೆಯುವುದು, ಕಟ್ಟಡ ಹಾಳುಗೆಡುವುದನ್ನು ಮಾಡುತ್ತಿದ್ದರು. ಅದನ್ನೆಲ್ಲ ಆಲೋಚಿಸಿ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ ಆರಂಭಿಸಿದ್ದೆವು. ಪ್ರಸಕ್ತ ವರ್ಷದಿಂದ ಪಾಲಿಟೆಕ್ನಿಕ್ ಕಾಲೇಜ್ ಕಾರ್ಯಾರಂಭ ಮಾಡಿದೆ. ವಸತಿ ಶಾಲೆ ಸ್ಥಳಾಂತರಿಸಲಾಗುವುದು ಎಂದರು.
2.50 ಕೋಟಿ ಬಿಡುಗಡೆ: ಪಾಲಿಟೆಕ್ನಿಕ್ ಕಾಲೇಜ್‌ಗೆ ಲ್ಯಾಬ್ ಹಾಗೂ ವರ್ಕಶಾಪ್ ಮಾಡಲು ಮತ್ತೆ 2.50 ಕೋಟಿ ರೂ. ಬಿಡುಗಡೆಯಾಗಿದೆ. ವರ್ಕ್‌ಶಾಪ್ ಅನ್ನು ಕಾಲೇಜ್‌ನ ಹೊರಾಂಗಣದಲ್ಲಿ ಶೆಡ್ ನಿರ್ಮಿಸಿ ವರ್ಕ್‌ಶಾಪ್ ನಿರ್ಮಿಸಲಾಗುವುದು ಎಂದು ಶಾಸಕರು ತಿಳಿಸಿದರು.
ರೋಣದ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಒಟ್ಟು 240 ವಿದ್ಯಾರ್ಥಿಗಳ ಪ್ರವೇಶಕ್ಕೆ ಸರ್ಕಾರ ಅನುಕೂಲ ಕಲ್ಪಿಸಿದೆ. ಸರ್ಕಾರದ ಪ್ರವೇಶ ಶುಲ್ಕ 5000 ರೂ. ಗಳಿದ್ದು, ಇಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ಖನಿಜ ಅಭಿವೃದ್ಧಿ ನಿಗಮದಿಂದ ಅವರ ಶುಲ್ಕವನ್ನು ಪಾವತಿಸಿ ಉಚಿತವಾಗಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಘೋಷಿಸಿದರು.