ಶಿರಹಟ್ಟಿ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನಾ ಸಾಮಾನ್ಯ ಸಭೆಯಲ್ಲಿ ತಾ.ಪಂ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಇದ್ದರು. 
ಗದಗ

ಅನುದಾನ ಲ್ಯಾಪ್ಸ್ ಆದ್ರೆ ಅಧಿಕಾರಿಗಳೇ ಹೊಣೆ

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ಶಿರಹಟ್ಟಿ
ತಾಲೂಕು ಮಟ್ಟದ ಸಭೆಗಳಿಗೆ ಅಧಿಕಾರಿಗಳು ಗೈರು ಹಾಜರಾಗುವುದು, ಸಭೆಯಲ್ಲಿ ಮೊಬೈಲ್ ಬಳಸುವುದು ಹಾಗೂ ಇಲಾಖೆಗಳ ಪ್ರಗತಿ ಬಗ್ಗೆ ಅಸ್ಪಷ್ಟ ಮಾಹಿತಿ ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಒಂದು ವೇಳೆ ಅನುದಾನ ಲ್ಯಾಪ್ಸ್ ಆದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಾ.ಪಂ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಖಡಕ್ ಎಚ್ಚರಿಕೆ ನೀಡಿದರು.
ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ಇಲಾಖಾವಾರು ಪ್ರಗತಿ ಪರಿಶೀಲನಾ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆ ಆರಂಭವಾದರೂ ಹಲವು ಇಲಾಖೆಯ ಅಧಿಕಾರಿಗಳು ಹಾಜರಿರಲಿಲ್ಲ. ಇನ್ನು ಕೆಲವು ಅಧಿಕಾರಿಗಳು ಗಂಭೀರ ಚರ್ಚೆ ನಡೆಯುತ್ತಿದ್ದರೂ ಮೊಬೈಲ್‌ನಲ್ಲಿ ತಲ್ಲೀನರಾಗಿದ್ದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಆಡಳಿತಾಧಿಕಾರಿಗಳು, ಸಭೆಗೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುವ ಅಧಿಕಾರಿಗಳ ನಡೆ ಸಭೆಯ ನಡವಳಿಕೆಗೆ ವಿರುದ್ಧವಾಗಿದೆ. ಇಂತಹ ಬೇಜವಾಬ್ದಾರಿತನ ತೋರುವವರ ವಿರುದ್ಧ ಶಿಸ್ತುಕ್ರಮ ಅನಿವಾರ್ಯವಾಗುತ್ತದೆ ಎಂದರು.
ವರ್ತನೆ ಅಭಿವೃದ್ಧಿ ಕೆಲಸಗಳಿಗೆ ಮಾರಕ: ತಾಲೂಕು ಪಂಚಾಯಿತಿ ವತಿಯಿಂದ ವಿವಿಧ ಕಾಮಗಾರಿಗಳಿಗಾಗಿ ನಿರ್ಮಿತಿ ಕೇಂದ್ರಕ್ಕೆ 1 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ, ಈವರೆಗೆ ಯಾವುದೇ ಕಾಮಗಾರಿ ಆರಂಭಿಸಿಲ್ಲ. ಕ್ರಿಯಾಯೋಜನೆಯ ಮಾಹಿತಿ ಕೇಳಲು ಅಧಿಕಾರಿಗಳು ಸಭೆಗೆ ಬರುವುದಿಲ್ಲ. ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ರೀತಿಯ ವರ್ತನೆ ಅಭಿವೃದ್ಧಿ ಕೆಲಸಗಳಿಗೆ ಮಾರಕವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ ಅಗತ್ಯ: ಬಿಇಒ ಕಚೇರಿಯ ಗುಮಾಸ್ತೆಯೊಬ್ಬರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಪ್ರಸ್ತಾಪಿಸಿದ ಅವರು, ಇದು ಅತ್ಯಂತ ಬೇಸರದ ಸಂಗತಿ. ಇಲಾಖೆಯಲ್ಲಿ ಶಿಕ್ಷಕರ ಯಾವುದೇ ಕೆಲಸಗಳಿದ್ದರೂ ವಿಳಂಬ ಮಾಡದೇ ಮಾಡಿಕೊಡಬೇಕು. ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಕೆಯಷ್ಟೇ ಅಲ್ಲದೆ, ನೀಟ್, ಸಿಇಟಿ ಹಾಗೂ ಕೇಂದ್ರ ಸರ್ಕಾರದ ಉದ್ಯೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಬಿಇಒಗೆ ಸೂಚಿಸಿದರು.
ಅಲ್ಲದೆ, ಶಾಲೆಗಳಲ್ಲಿ ಶೌಚಾಲಯ ಮತ್ತು ಕೊಠಡಿ ದುರಸ್ತಿಯಂತಹ ತುರ್ತು ಕೆಲಸಗಳನ್ನು ಬಿಟ್ಟು ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಪರಿಷ್ಕೃತ ಕ್ರಿಯಾಯೋಜನೆ ಸಲ್ಲಿಸಲು ಆದೇಶಿಸಿದರು.
ಸಭೆಯಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹಾಗೂ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆಲಸ ಮಾಡದಿದ್ದರೆ ಅನುಮೋದನೆ ಇಲ್ಲ
ತಾಲೂಕಿನಲ್ಲಿ ಲೋಕಾಯುಕ್ತ ದಾಳಿ, ರೇಷ್ಮೆ ಇಲಾಖೆ ಗೊಂದಲ ಹಾಗೂ ಬೆಳೆ ವಿಮೆ ವಿಷಯಗಳು ಚರ್ಚೆಯಾಗುತ್ತಿವೆ. ಅಧಿಕಾರಿಗಳು ಇಲಾಖೆಯ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬರಬೇಕು. ಅನುಮೋದನೆ ಪಡೆದ ಕ್ರಿಯಾಯೋಜನೆಯನ್ನು ಪದೇ ಪದೆ ಬದಲಿಸುವುದನ್ನು ನಿಲ್ಲಿಸಿ. ಕೆಲಸ ಮಾಡದಿದ್ದರೆ ಅನುಮೋದನೆ ನೀಡುವುದಿಲ್ಲ ಎಂದು ತಾ.ಪಂ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ತಿಳಿಸಿದರು.