GAJENDRAGADA GAMBLING 
ಗದಗ

GAMBLING ಕೋಟೆನಾಡಿನಲ್ಲಿ ಜೂಜಾಟ, ಮಟ್ಕಾ ಮುಕ್ತ...ಮುಕ್ತ...

ಮಂಜುನಾಥ ಕುದರಿಕೋಟಿ ಗಜೇಂದ್ರಗಡ
ಪಟ್ಟಣ ಹಾಗೂ ಸುತ್ತಲಿನ ಹಲವಾರು ಗ್ರಾಮಗಳು ಕಾನೂನುಬಾಹಿರ ಚಟುವಟಿಕೆಯ ತಾಣಗಳಾಗುತ್ತಿವೆ. ಮಟ್ಕಾ, ಜೂಜಾಟದ (GAMBLING) ವ್ಯಸನ ಗ್ರಾಮೀಣ ಪ್ರದೇಶಗಳ ಜನರನ್ನು ಸಾಲ ಸುಳಿಗೆ ನೂಕುತ್ತಿದೆ.
ಗಜೇಂದ್ರಗಡ ಗುಡ್ಡ ಹಾಗೂ ಬೈರಾಪುರ ಬೆಟ್ಟ, ಶಾಂತಗೇರಿ, ನೆಲ್ಲೂರು, ಪ್ಯಾಟಿ, ಮುಶಿಗೇರಿ, ಲಕ್ಕಲಕಟ್ಟಿ, ಕಲ್ಲಿಗನೂರು, ಗೋಗೇರಿ ಗ್ರಾಮಗಳ ಹೊರವಲಯಗಳಲ್ಲಿ ಅಕ್ರಮ ಅಡ್ಡೆಗಳು ಅವ್ಯಾಹತವಾಗಿ ತಲೆಎತ್ತಿವೆ. ಅಲ್ಲಿ ಜೂಜಾಟ, ಮಟ್ಕಾ, ಅಕ್ರಮ ಮದ್ಯದ ಹಾವಳಿ ಅಡೆತಡೆ ಇಲ್ಲದೆ ಸಾಗುತ್ತಿದೆ. ಹಾಡಹಗಲೇ ಅಕ್ರಮ ದಂಧೆ ನಡೆಯುತ್ತಿದ್ದರೂ ಕಡಿವಾಣ ಹಾಕಲು ಯಾರೂ ಮುಂದಾಗುತ್ತಿಲ್ಲ.
ಮಟ್ಕಾ, ಜೂಜಾಟ ಕಾನೂನುಬಾಹಿರವಾಗಿದ್ದರೂ ಅದನ್ನು ಆಡುವವರು ಮತ್ತು ಅಡಿಸುವವರು ನಿರಾಂತಕವಾಗಿ ಓಡಾಡಿಕೊಂಡಿದ್ದಾರೆ. ಐತಿಹಾಸಿಕ ಪಟ್ಟಣ, ಕೋಟೆನಾಡು ಎಂಬ ಖ್ಯಾತಿಯನ್ನು ಕಳಚಿಕೊಂಡು ಮಟ್ಕಾ, ಇಸ್ಪೀಟ್ ಮತ್ತು ಅಕ್ರಮ ಮದ್ಯದ ತಾಣವಾಗಿ ಬದಲಾಗಿದೆ. ಸಣ್ಣ ಚೀಟಿಯ ಮೇಲೆ ಮಟ್ಕಾ ದಂಧೆ ನಡೆಯುತ್ತದೆ. ಬೆಳಗ್ಗೆ 6ರಿಂದ ಸಂಜೆ 8 ಗಂಟೆಯ ವೇಳೆಯಲ್ಲಿ ನಡೆಯುವ ಈ ಆಟದಲ್ಲಿ 10 ರೂ.ನಿಂದ ಪ್ರಾರಂಭವಾಗಿ ಲಕ್ಷ ಲಕ್ಷ ಹಣದವರೆಗೂ ವಹಿವಾಟು ನಡೆಯುತ್ತಿದೆ. ಪಟ್ಟಣದ ಕೆಲವು ಮನೆಗಳು, ಅಂಗಡಿಗಳು. ಪಾನ್‌ಶಾಪ್, ಕಟಿಂಗ್ ಶಾಪ್, ಪಾಳುಬಿದ್ದ ದೇವಸ್ಥಾನಗಳು ಮಟ್ಕಾ ಸಂಖ್ಯೆ ಬರೆದುಕೊಳ್ಳಲಾಗುತ್ತಿದೆ. ಈ ಚಟಕ್ಕೆ ಕೂಲಿಕಾರರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ.ಮಟ್ಕಾ ದಂಧೆಗಳು ಹೆಚ್ಚಾಗುತ್ತಿದ್ದರೂ ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಮುಂದಾಗುತ್ತಿಲ್ಲ. ಇಂತಹ ದಂಧೆಯಲ್ಲಿ ತೊಡಗಿದ ಖದೀಮರಿಗೆ ಕಡಿವಾಣ ಹಾಕಿ ತಾಲೂಕಿನಿಂದ ಗಡಿಪಾರು ಮಾಡಬೇಕು ಎಂಬುದು ಜನರ ಆಗ್ರಹ.
"

ಗಜೇಂದ್ರಗಡದಲ್ಲಿನ ಜೂಜಾಟ ಮತ್ತು ಮಟ್ಕಾ ಕೇಸ್‌ಗಳು ಗಮನಕ್ಕೆ ಬಂದಿವೆ. ಒಂದೇ ವಾರದಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲು ಮಾಡಿದ್ದೇವೆ. ಇಲಾಖೆ ಸಿಬ್ಬಂದಿ ದಂಧೆಕೋರರ ಹಿಂದೆ ಬಿದ್ದಿದ್ದಾರೆ. ಅಕ್ರಮ ಚಟುವಟಿಕೆ ನಡೆಯದಂತೆ ಕ್ರಮ ವಹಿಸಲಾಗಿದೆ. ಸಾರ್ವಜನಿಕರಿಗೆ ಮಾಹಿತಿ ತಿಳಿದಿದ್ದರೆ ನಮ್ಮ ಇಲಾಖೆಗೆ ತಿಳಿಸಬೇಕು.ಮಾಹಿತಿದಾರರ ಹೆಸರನ್ನು ಗುಪ್ತವಾಗಿಡಲಾಗುವುದು. -ವಿಜಯಕುಮಾರ ನಾಯಕ, ಸಿಪಿಐ, ಗಜೇಂದ್ರಗಡ