ಗದಗ ತಾಲೂಕಿನ ಸೂಡಿಯಲ್ಲಿ ಏರ್ಪಡಿಸಿದ್ದ ಧರ್ಮ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಉದ್ಘಾಟಿಸಿದರು. ಸೂಡಿ ಜುಕ್ತಿ ಹಿರೇಮಠದ ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ಡಿಎಚ್‌ಒ ಎಸ್.ಎಸ್. ನೀಲಗುಂದ, ಧಾರವಾಡ ಡಿಎಚ್‌ಒ ಡಾ. ಹೋನಕೇರಿ, ಇತರರಿದ್ದರು. 
ಗದಗ

ಮನುಷ್ಯನಿಗೆ ಮುಖ್ಯವಾದ ಆಸ್ತಿ ಆರೋಗ್ಯ health

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅನಿಸಿಕೆ
  • ಧರ್ಮ ಸಮಾರಂಭ ಉದ್ಘಾಟನೆ
ಗಜೇಂದ್ರಗಡ: ಮನುಷ್ಯನಿಗೆ ಮುಖ್ಯವಾದ ಆಸ್ತಿ ಆರೋಗ್ಯ. ಆರೋಗ್ಯ ಸರಿಯಾಗಿದ್ದರೆ ಏನನ್ನಾದರೂ ಸಾಧಿಸಬಹುದು. ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ತಾಲೂಕಿನ ಸೂಡಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ವೀರಶೈವ ಧರ್ಮಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 
ಜನರಲ್ಲಿ ಆರೋಗ್ಯ ರಕ್ಷಣೆ ಜಾಗೃತಿ ಮೂಡಿಸಲು ಸೂಡಿ ಜುಕ್ತಿ ಹಿರೇಮಠದ ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಮತ್ತಿತರ ಶಿಬಿರ ಆಯೋಜಿಸುವ ಮೂಲಕ ಸಾಮಾಜಿಕ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ. ಜನರು ಆಯುಷ್ಮಾನ್ ಭಾರತ ಯೋಜನೆಯ ಸದುಪಯೋಗ ಪಡೆಯಬೇಕು ಎಂದರು.
ಡಾ. ಆನಂದ ಪಾಂಡುರಂಗಿ ಮಾತನಾಡಿ, ಮನುಷ್ಯ ಬದುಕಿಗಾಗಿ ಸಂಪಾದನೆ ಮಾಡಬೇಕೆ ವಿನಹ ಸಂಪಾದನೆಗಾಗಿ ಬದುಕಬಾರದು. ದೈಹಿಕ, ಮಾನಸಿಕ ಆರೋಗ್ಯ ಇದ್ದಾಗ ಮಾತ್ರ ಸುಖ ಜೀವನ ನಡೆಸಲು ಸಾಧ್ಯ ಎಂದರು.
ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಮಾತನಾಡಿ, ಯುವ ಜನತೆ ಅತಿಯಾದ ಮೊಬೈಲ್ ಫೊನ್, ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವಿರಬೇಕು. ಮನಸಿಗೆ ನೆಮ್ಮದಿ ನೀಡುವ ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಸದಾಕಾಲ ಸಕಾರಾತ್ಮಕ ಚಿಂತನೆಗಳನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ವೇ.ಮೂ. ಪುಟ್ಟಯ್ಯ ಶಾಸ್ತ್ರಿಗಳು ಆಲಳ್ಳಿಮಠ, ಯಜುರ್ವೇದ ವೈದಿಕ ವೃಂದ, ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯರು, ಶ್ರೀ ಚೆನ್ನಸಿದ್ಧೇಶ್ವರ ಶಿವಾಚಾರ್ಯರು, ಶ್ರೀ ಫಕೀರೇಶ್ವರ ಶಿವಾಚಾರ್ಯರು, ಸಾನ್ನಿಧ್ಯ ವಹಿಸಿದ್ದರು.
ಡಾ. ಎಸ್.ಆರ್. ರಾಮನಗೌಡರ ಅವರಿಗೆ ‘ವೈದ್ಯ ರತ್ನಾಕರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗದಗ ಡಿಎಚ್‌ಒ ಎಸ್.ಎಸ್. ನೀಲಗುಂದ, ಧಾರವಾಡ ಡಿಎಚ್‌ಒ ಡಾ. ಹೋನಕೇರಿ ಸೇರಿದಂತೆ ಹಲವಾರು ತಜ್ಞ ವೈದ್ಯರು, ಸೂಡಿ ಗ್ರಾಮದ ಗುರು-ಹಿರಿಯರು, ಯುವಕರು ಇದ್ದರು.
52 ಯೂನಿಟ್ ರಕ್ತ ಸಂಗ್ರಹ 
ಜಾತ್ರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಒಟ್ಟು 52 ಯೂನಿಟ್ ರಕ್ತ ಸಂಗ್ರಹವಾಗಿದೆ. ಗಜೇಂದ್ರಗಡ ಪಿಎಸ್‌ಐ ಪ್ರಕಾಶ ಡಿ. ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಯುವಕರು, ಯುವತಿಯರು ರಕ್ತದಾನ ಮಾಡಿದರು. ಆರೋಗ್ಯ ತಪಾಸಣೆ ಶಿಬಿರದಲ್ಲಿ 1,200 ಜನರು ಆರೋಗ್ಯ ತಪಾಸಣೆಗೆ ಒಳಗಾದರು.