ನರೇಗಲ್ಲ ಸಮೀಪದ ಜಮೀನೊಂದರಲ್ಲಿ ಹಳದಿ ರೋಗಕ್ಕೆ ತುತ್ತಾಗಿರುವ ಹೆಸರು ಬೆಳೆ.
- ಸರ್ಕಾರದ ಆದೇಶಕ್ಕೂ ಕಿಮ್ಮತ್ತಿಲ್ಲ ಬೆಳೆಗಾರರ ತೀವ್ರ ಅಸಮಾಧಾನ
ನರೇಗಲ್ಲ: ಮುಂಗಾರು ಮುನಿಸಿಕೊಂಡಿದೆ. ವಾಣಿಜ್ಯ ಬೆಳೆಗಳು ತೇವಾಂಶ ಕೊರತೆಯಿಂದ ಬಾಡುತ್ತಿವೆ. ಪ್ರಸಕ್ತ ವರ್ಷ ಬೆಳೆಸಾಲ ಪಡೆದಿರುವ ರೈತರು ಬೆಳೆ ವಿಮೆ ಯೋಜನೆಗೆ ಆಯಾ ಬ್ಯಾಂಕ್ ಮೂಲಕವೇ ಕಡ್ಡಾಯವಾಗಿ ನೋಂದಣಿ ಮಾಡಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದರೂ ಬ್ಯಾಂಕ್‌ಗಳು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ರೈತರು ಆತಂಕದಲ್ಲಿದ್ದಾರೆ.
ಸಿಎಸ್‌ಸಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ವಿಮೆ ನೋಂದಣಿ ಮಾಡಿಸಲು ಸಾಲ ಪಡೆಯದ ದೃಢೀಕರಣದ ಜತೆಗೆ ಘೋಷಣಾ ಪತ್ರ, ಪಹಣಿ, ಆಧಾರ್ ಕಾರ್ಡ್, ಬೆಳೆಯ ವಿವರ ನೀಡಬೇಕಿದೆ. ಮಾರ್ಗಸೂಚಿ ಪ್ರಕಾರ, ರೈತರು ಬೆಳೆಸಾಲ ಪಡೆಯುವ ಹಂತದಲ್ಲೇ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಪುನರ್ ರೂಪಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ, ಈ ಬಾರಿ ತೀವ್ರ ಬರದ ಆತಂಕ ತಲೆದೋರಿದ್ದರೂ ಈವರೆಗೆ ಶೇ. 10ರಷ್ಟು ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ.
ಪ್ರತಿವರ್ಷ ಮಧ್ಯವರ್ತಿಗಳು ಸಂಪೂರ್ಣ ಪ್ರೀಮಿಯಂ ಹಣ ಭರಿಸುವ ಅಮಿಷವೊಡ್ಡಿ, ಆನ್‌ಲೈನ್ ಪೋರ್ಟಲ್‌ನಲ್ಲಿ ರೈತರ ಬೆಳೆ ನೋಂದಣಿ ಮಾಡಿಸುತ್ತಾರೆ. ವಿಮಾ ಪರಿಹಾರ ಮೊತ್ತದಲ್ಲಿ ಅರ್ಧದಷ್ಟನ್ನು ಪಡೆದು ಕೃಷಿಕರು ಹಾಗೂ ವಿಮಾ ಕಂಪನಿಗಳಿಗೆ ಮೋಸ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕೃಷಿ ಇಲಾಖೆ ಆಯುಕ್ತರು ಆಯಾ ಬ್ಯಾಂಕ್‌ಗಳಲ್ಲೇ ಬೆಳೆ ವಿಮೆ ನೋಂದಣಿ ಕಡ್ಡಾಯಗೊಳಿಸಿ ಆದೇಶಿ ಹೊರಡಿಸಿದ್ದಾರೆ.
ಬ್ಯಾಂಕ್‌ಗಳಲ್ಲಿ ಬೆಳೆಸಾಲ ಪಡೆಯದ ರೈತರಿಗಷ್ಟೇ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಸ್ವ ಇಚ್ಛೆಯಿಂದ ಬೆಳೆ ವಿಮೆ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕಾರಣದಿಂದ ಅಲ್ಲಿಯೂ ವಿಮೆ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಬಹುತೇಕ ರೈತರು ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆಗಳ ಮೇಲೆ ಸಾಲ ಪಡೆದಿರುತ್ತಾರೆ. ಆದರೆ, ಈಗ ಹೆಸರು ಬೆಳೆಗೆ ವಿಮೆ ಮಾಡಲು ಬರುವುದಿಲ್ಲ. ಇದರಿಂದ ಆಡಿಟ್ ವೇಳೆ ಸಮಸ್ಯೆ ಆಗಲಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬಾಂಕ್ ಅಧಿಕಾರಿ.
"
ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಹೊಂದಿರುವ ರೈತರು ಅಲ್ಲಿಯೇ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದಿಂದ ಆದೇಶಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳು ತಮ್ಮ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಬೆಳೆ ವಿಮೆ ನೋಂದಣಿ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ.
ನಿಂಗಯ್ಯ, ವಿಮಾ ಕಂಪನಿ ಅಧಿಕಾರಿ ಗದಗ
"
ಬೆಳೆ ಸಾಲ ಪಡೆದ ರೈತರ ಅರ್ಜಿ ಸಲ್ಲಿಸದಂತೆ ಮೇಲಧಿಕಾರಿಗಳಿಂದ ಸೂಚನೆ ನೀಡಲಾಗಿದೆ. ರೈತರು ಬೆಳೆ ಸಾಲ ಮಾಡಿಲ್ಲ ಎಂದು ನಮೂದಿಸಿದರೆ ಮಾತ್ರ ನೋಂದಣಿ ಮಾಡಿಸಲು ಅವಕಾಶವಿದೆ. ನಾವು ಸದ್ಯಕ್ಕೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದೇವೆ. ಬಸವರಾಜ ಮೇಟಿ, ಗ್ರಾಮ ಒನ್ ಹಾಲಕೆರೆ