Gadag Loka Raid 
ಗದಗ

ಲೋಕಾದಾಳಿ! ಎಎಸ್​ಐ ಸಿ.ವಿ. ಇಂಗಳಹಳ್ಳಿ ಲೋಕಾ ವಶಕ್ಕೆ

ಗದಗ: ಪೊಲೀಸ್​ ಠಾಣೆಯಲ್ಲೇ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಶಹರ ಪೊಲೀಸ್​ ಠಾಣೆಯ ಎಎಸ್​ಐ ಸಿ. ವಿ. ಇಂಗಳಹಳ್ಳಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಅರ್ಜಿಯೊಂದನ್ನು ವಜಾ ಮಾಡಲು 13 ಸಾವಿರ ರೂ. ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ದೂರುದಾರರ ದೂರು ಆಧರಿಸಿ ಬುಧವಾರ ಲಂಚ ಪಡೆಯುತ್ತಿದ್ದ ವೇಳೆ ದಾಳೀ ನಡೆಸಿದ ಲೋಕಾ ಅಧಿಕಾರಿಗಳು ಇಂಗಳಹಳ್ಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ದೂರಿನಲ್ಲಿ ಏನಿದೆ?
ನಗರದ ಹುಡ್ಕೋ ಕಾಲನಿಯ ನಿವಾಸಿ ವಿರೇಶ ಪೂಜಾರ ಬುಧವಾರ ದೂರು ಸಲ್ಲಿಸಿದ್ದರು. ವಿರೇಶ ಅವರ ತಾಯಿಯ ಹೆಸರಿನಲ್ಲಿ ಅರ್ಜಿಯೊಂದ ಪೊಲೀಸ್​ ಠಾಣೆಗೆ ಸಲ್ಲಿಸಲಾಗಿತ್ತು. ಈ ಅಜಿರ್ಯನ್ನು ವಜಾ ಮಾಡಬೇಕು ಎಂದು ವಿರೇಶ ಮನವಿ ಮಾಡಿದ್ದರು. ವಜಾ ಮಾಡಲು ಎಎಸ್​ಐ ಇಂಗಳಹಳ್ಳಿ ಅವರು 13 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಕೊನೆಗೆ 10 ಸಾವಿರ ರೂ. ಲಂಚದ ವ್ಯವಹಾರ ಕುದರಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ವಿರೇಶ ಗದಗ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. 10 ಸಾವಿರ ರೂ. ಲಂಚ ನೀಡುವ ವೇಳೆ ಎಎಸ್​ಐ ಇಂಗಳಹಳ್ಳಿ ಲೋಕಾ ಬಲೆಗೆ ಬಿದ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾ ಅಧಿಕಾರಿಗಳಾದ ವಿಜಯ ಬಿರಾದಾರ, ಪರಮೇಶ ಕವಟಗಿ, ಎಸ್​.ಎಸ್​. ತೇಲಿ, ಎಂ. ಎಂ. ಅಯ್ಯನಗೌಡ್ರ ಇತರರು ಇದ್ದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಲೋಕಾದಾಳಿ ನಿರಂತರವಾಗಿ ನಡೆಯುತ್ತಿವೆ. ಕಳೆದ ಶನಿವಾರ ಶಾಸಕ ಚಂದ್ರು ಲಮಾಣಿ 5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈಗ ಪೊಲೀಸ್​ ಅಧಿಕಾರಿಗಲೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾ ದಾಳಿಗೆ ಒಳಗಾಗಿದ್ದು, ಗದಗ ಜಿಲ್ಲೆ ಮತ್ತೊಮ್ಮೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.