ಗದಗ

ಗದಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ: ಸೋಲು-ಗೆಲುವಿಗಿಂತ ಭ್ರಾತೃತ್ವವೇ ಮುಖ್ಯ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

ಗದಗ: ಸತತ ಕರ್ತವ್ಯದ ನಡುವೆ ಪೊಲೀಸ್ ಸಿಬ್ಬಂದಿ ತಮ್ಮ ಆರೋಗ್ಯ, ವಿಶ್ರಾಂತಿ ಹಾಗೂ ಪರಸ್ಪರ ಬಾಂಧವ್ಯವನ್ನು ವೃದ್ಧಿಸಿಕೊಳ್ಳಲು ಇಂತಹ ಕ್ರೀಡಾಕೂಟಗಳು ಅತ್ಯಗತ್ಯ ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಸಕ್ರಿಯ ಭಾಗಿತ್ವ ಭ್ರಾತೃತ್ವವೇ ಮುಖ್ಯ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ತಿಳಿಸಿದರು.

ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ (19) ರಂದು ಜರುಗಿದ ಗದಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಕೆಲಸವು ದಿನದ 24 ಗಂಟೆಯೂ, ವರ್ಷದ 365 ದಿನವೂ ನಡೆಯುವಂತಹದ್ದಾಗಿದ್ದು, ಹಬ್ಬ-ಹರಿದಿನ, ಕೌಟುಂಬಿಕ ಸಂದರ್ಭಗಳನ್ನೂ ಲೆಕ್ಕಿಸದೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಇಂತಹ ಒತ್ತಡದ ಬದುಕಿನ ಮಧ್ಯೆ ಮೂರು ದಿನಗಳನ್ನು ಕೇವಲ ತಮ್ಮದೇ ಕ್ರೀಡಾಕೂಟಕ್ಕಾಗಿ ಮೀಸಲಿಟ್ಟಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಮೂಲ ಉದ್ದೇಶ ಸೋಲು-ಗೆಲುವು ಅಥವಾ 'ನಾನು ಶ್ರೇಷ್ಠ, ನೀನು ಶ್ರೇಷ್ಠ' ಎಂಬುದಲ್ಲ. ಬದಲಾಗಿ, ಪೊಲೀಸ್ ಸಮುದಾಯದ ಭ್ರಾತೃತ್ವವನ್ನು ಎತ್ತಿ ಹಿಡಿಯುವುದು ಮತ್ತು ಪರಸ್ಪರ ಸಂಬಂಧಗಳನ್ನು ಇನ್ನಷ್ಟು ಸದೃಢಗೊಳಿಸುವುದಾಗಿದೆ. ಕೆಲವೊಮ್ಮೆ ಕೆಲಸದ ಒತ್ತಡ ಅಥವಾ ಭಿನ್ನಾಭಿಪ್ರಾಯಗಳಿಂದ ಉಂಟಾಗುವ ಅಂತರವನ್ನು ಕಡಿಮೆ ಮಾಡಿ, ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತರುವಲ್ಲಿ ಇಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಎಲ್ಲರೂ ಸಮಾನರು ಎಂಬ ಭಾವನೆಯೊಂದಿಗೆ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಬೇಕು. ಗೆಲುವೊಂದೇ ಮಾನದಂಡವಾಗದೆ, ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಭ್ರಮಿಸುವುದು ಮುಖ್ಯ. ಕ್ರೀಡಾ ಮನೋಭಾವನೆಯು ಮಾನವೀಯತೆಯ ಒಂದು ಭಾಗವಾಗಿದ್ದು, ಸಿಬ್ಬಂದಿ ತೀರ್ಪುಗಾರರ ತೀರ್ಪಿಗೆ ಬದ್ಧರಾಗಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್. ಎನ್. ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಡಿ.ಎ.ಆರ್. ವಲಯದ ಆರ್.ಪಿ.ಐ ಎಸ್.ಬಿ. ಚೌದ್ರಿ ನಿರೂಪಿಸಿ. ಡಿ. ಎಸ್.ಪಿ. ವಿ.ವಿ. ನಾಯಕ ವಂದಿಸಿದರು.

ಕಾರ್ಯಕ್ರಮದಲ್ಲಿ  ಸೈಬರ್ ಕ್ರೈಮ್ ಡಿ.ವೈ. ಎಸ್.ಪಿ. ಮಹಾಂತೇಶ್ ಸಜ್ಜನ,  ಡಿ.ವೈ.ಎಸ್.ಪಿ. ಮುರ್ತುಜಾ ಖಾದ್ರಿ ಸೇರಿದಂತೆ ವಿವಿಧ ವಲಯದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.