ನರೇಗಲ್ಲ ಪಟ್ಟಣದ ಗದಗ ರಸ್ತೆ ಮಾರ್ಗದ ಹಿರೇಮಠ ಶಾಲೆಯ ಸಮೀಪದಲ್ಲಿರುವ ವಿದ್ಯುತ್ ಕಂಬದ ಟಿಸಿಯಲ್ಲಿ TC ಕಾಣಿಸಿಕೊಂಡ ಬೆಂಕಿ ಹಾಗೂ ಹೊಗೆ.
ನರೇಗಲ್ಲ: ಪಟ್ಟಣದ ಗದಗ ರಸ್ತೆ ಮಾರ್ಗದ ಹಿರೇಮಠ ಶಾಲೆಯ ಸಮೀಪದಲ್ಲಿರುವ ವಿದ್ಯುತ್ ಕಂಬದ ಟಿಸಿಯಲ್ಲಿ TC ಆಗಾಗ ಬೆಂಕಿ ಕಾಣಿಸಿಕೊಳ್ಳುತ್ತಿರುವ ಕಾರಣ ಸುತ್ತಲಿನ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಗುರುವಾರ ಕಾಣಿಸಿಕೊಂಡ ಬೆಂಕಿಯಿಂದ ದೊಡ್ಡದಾಗಿ ಹೊಗೆ ಬರಲು ಆರಂಭಿಸಿದಾಗ ಜನರು ಭಯಗೊಂಡರು. ಕೆಲ ಹೊತ್ತಿನ ನಂತರ ಸ್ಥಳೀಯ ಹೆಸ್ಕಾಂ ಸಿಬ್ಬಂದಿ ಬಂದು ತಾತ್ಕಾಲಿಕವಾಗಿ ಸರಿಪಡಿಸಿದರು.
ಈ ಹಿಂದೆ ಬೆಂಕಿ ಕಾಣಿಸಿಕೊಂಡಾಗ ಸ್ಥಳೀಯರು ನೀರು ಎರಚಿ ನಂದಿಸಲು ಹೋದಾಗ ಶಾಕ್ ಹೊಡೆಸಿಕೊಂಡಿರುವ ಘಟನೆಗಳು ನಡೆದಿವೆ. ಹೀಗಾಗಿ ಬೆಂಕಿ ಕಾಣಿಸಿಕೊಂಡಾಗ ಜನರು ಭಯಭೀತರಾಗುತ್ತಿದ್ದಾರೆ. ಆದರೆ, ಹೆಸ್ಕಾಂನವರು ಇದನ್ನು ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ಪಕ್ಕದಲ್ಲಿಯೇ ಹಿರೇಮಠ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಗ್ರಾಮದ ಜನರು ಇಲ್ಲಿನ ರಸ್ತೆ ಮೂಲಕ ಸಂಚಾರ ಮಾಡುತ್ತಾರೆ. ಸುತ್ತಲೂ ಅನೇಕ ಮನೆಗಳಿವೆ ಹೀಗಾಗಿ ಅವಘಡಗಳು ಸಂಭವಿಸುವ ಮೊದಲು ಅಗತ್ಯಕ್ರಮ ಕೈಗೊಂಡು ಮತ್ತೇ ಬೆಂಕಿ ಕಾಣಿಸಿಕೊಳ್ಳದಂತೆ ಜಾಗೃತಿ ವಹಿಸಬೇಕು ಎಂದು ನಿವಾಸಿ ಶಿವಕುಮಾರ ಮಡಿವಾಳರ ಆಗ್ರಹಿಸಿದರು.