ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಭಾಗದ ತುಂಗಭದ್ರಾ ನದಿ ದಡದಲ್ಲಿ ಮೀನುಗಾರಿಕೆ ಮಾಡಲಾಗದೆ ತೆಪ್ಪಗಳನ್ನು ದಡದಲ್ಲಿ ಹಾಕಲಾಗಿದೆ. 
ಗದಗ

ಗಾಳಕ್ಕೆ ಸಿಗದ ಮೀನು!: fish farminig

ಮಂಜುನಾಥ ಗದಗಿನ

ಸಂತೋಷ ಮುರಡಿ ಮುಂಡರಗಿ

ಮಳೆ ಕೊರತೆಯಿಂದ ಬೆಳೆದ ಬೆಳೆ ಬಾಡುವ ಹಂತ ತಲುಪಿ ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಮಳೆ ಇಲ್ಲದೆ ತುಂಗಭದ್ರಾ ನದಿಯಲ್ಲಿ ಹರಿವು ಇಳಿಕೆ ಕಂಡಿದ್ದು, ಇದರಿಂದ ಮೀನುಗಾರಿಕೆ ಮೇಲೆ ಪರಿಣಾಮ ಬೀರುತ್ತಿದೆ.
ತುಂಗಭದ್ರಾ ನದಿ ದಡ ಭಾಗದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೀನುಗಾರರ ಕುಟುಂಬ ವಾಸವಿದ್ದು, ಮೀನುಗಾರಿಕೆಯೇ ಅವರ ಪ್ರಮುಖ ಉದ್ಯೋಗವಾಗಿದೆ. ಮಳೆ ಕೊರತೆಯಿಂದ ನದಿ ನೀರಿನ ಹರಿವು ಕಡಿಮೆಯಾಗಿದೆ. ಕಳೆದೊಂದು ವಾರದಿಂದ ಮಲೆನಾಡಿನ ವಿವಿಧ ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ತಕ್ಕ ಮಟ್ಟಿಗೆ ನದಿಗೆ ನೀರು ಹರಿದು ಬರುತ್ತಿದೆ. ಸದ್ಯ ಹರಿಯುತ್ತಿರುವ ನೀರು ನದಿ ಮಧ್ಯೆ ಭಾಗದಲ್ಲಿ ಹರಿದು ಹೋಗುವುದರಿಂದ ದಡದಲ್ಲಿ ಹೆಚ್ಚಾಗಿ ನೀರು ನಿಲ್ಲುವುದಿಲ್ಲ. ಹರಿಯುವ ನದಿ ಮಧ್ಯೆ ಭಾಗಕ್ಕೆ ಬಲೆ ಹಾಕುವುದಕ್ಕೂ ಬರುವುದಿಲ್ಲ. ದಡದಲ್ಲಿ ಹೆಚ್ಚು ಪ್ರಮಾಣ ನಿಲ್ಲದಿರುವುದರಿಂದ ಮೀನುಗಾರಿಕೆ ಮಾಡುವುದಕ್ಕೆ ತೊಂದರೆಯಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದರೆ ಅಥವಾ ನೀರು ಹರಿಯದೇ ನಿಂತರೆ ಮಾತ್ರ ಮೀನುಗಾರರು ನದಿಯಲ್ಲಿ ಒಂದು ತೆಪ್ಪದಲ್ಲಿ ಇಬ್ಬರು ಮೀನುಗಾರರು ಸಂಚರಿಸಿ ವಿವಿಧ ತಳಿಯ ಮೀನುಗಳನ್ನು ಹಿಡಿಯುತ್ತಾರೆ. ಅದನ್ನು ಮಾರಾಟ ಮಾಡಿ ಬರುವ ಆದಾಯದಲ್ಲಿ ಅವರ ಕುಟುಂಬ ನಿರ್ವಹಣೆ ಮಾಡುತ್ತಾರೆ.
ಆದರೆ, ಸುಮಾರು ಎರಡು ತಿಂಗಳಿಂದ ನದಿಯಲ್ಲಿ ಮೀನುಗಾರಿಕೆ ಮಾಡುವುದಕ್ಕೆ ಅವಕಾಶ ಆಗದೇ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಮೆ ಇಲ್ಲದೇ ಅವರ ಕುಟುಂಬ ನಿರ್ವಹಣೆ ಸಹ ಕಷ್ಟಕರವಾಗಿದೆ. ಜುಲೈ ಕೊನೆವಾರ, ಆಗಸ್ಟ್ ಮೊದಲ ವಾರದಲ್ಲಿ ನದಿಗೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿತ್ತು. ಆದರೆ, ಈಗ ಹರಿವು ತೀರ ಕಡಿಮೆಯಾಗಿದ್ದರಿಂದ ಮೀನುಗಾರರು ನದಿಗೆ ತೆಪ್ಪಗಳನ್ನು ಇಳಿಸದಂತಾಗಿದೆ. ಕೆಲವೊಬ್ಬರು ಮೀನುಗಾರಿಕೆಗೆ ನದಿಗೆ ತೆರಳಿದರೂ ಸರಿಯಾಗಿ ಮೀನುಗಳು ಸಿಗದಂತಾಗಿದೆ.
"

ಮಳೆ ಇಲ್ಲದೆ ತುಂಗಭದ್ರಾ ನದಿ ಹರಿವು ಕಡಿಮೆ ಇದ್ದು, ಮೀನುಗಳನ್ನು ಹಿಡಿಯುವುದಕ್ಕೆ ಆಗುತ್ತಿಲ್ಲ. ತೆಪ್ಪದ ಮೂಲಕ ನದಿಗೆ ಇಳಿದರೂ ಮೀನುಗಳು ಸಿಗುತ್ತಿಲ್ಲ. ನದಿಯಲ್ಲಿ ಮೀನುಗಾರಿಕೆ ಮಾಡಲಾಗದೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ.

— ಮುತ್ತಪ್ಪ ಕಿಳ್ಳೆಕ್ಯಾತರ ಕೊರ್ಲಹಳ್ಳಿ ಮೀನುಗಾರ

"

ಮುಂಡರಗಿ ತಾಲೂಕಿನ ವ್ಯಾಪ್ತಿಯಲ್ಲಿ ತುಂಗಭದ್ರಾ ನದಿ ಹರಿಯುತ್ತದೆ. ಆದರೆ, ಅದು ಹೊಸಪೇಟೆ ತುಂಗಭದ್ರಾ ಜಲಾಶಯದ ಹಿನ್ನೀರು ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ಅದರ ನಿರ್ವಹಣೆ ಡ್ಯಾಮ್ ಅವರಿಗೆ ಸಂಬಂಧಿಸಿದೆ. ಮೀನುಗಾರರಿಗೆ ಮೀನುಗಾರಿಕೆ ಸಲಕರಣೆ ಕಿಟ್ ಸೇರಿ ಇನ್ನಿತರ ಸೌಲಭ್ಯ ದೊರಕಿಸಿಕೊಡಲಾಗುವುದು.

— ವಿನಾಯಕ ಬೇವಿನಹಳ್ಳಿ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ ಮುಂಡರಗಿ