ತಹಸೀಲ್ದಾರ್ ಶ್ರೀಶೈಲ ತಳವಾರ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಗ್ರಾಮ ಲೆಕ್ಕಾಧಿಕಾರಿ ನೀರಜ್ ದೊಡಮನಿ, ಅನಿಲ ಭೋವಿ, ಇತರರು ನರಗುಂದದ ಸರ್ಕಾರಿ ತಾಲೂಕಾಸ್ಪತ್ರೆಗೆ ಭೇಟಿ ನೀಡಿ ರೈತನ ಆರೋಗ್ಯ ವಿಚಾರಿಸಿದರು.
ನರಗುಂದ: ಬೆಳೆಹಾನಿ ಪರಿಹಾರ ಬಾರದ್ದಕ್ಕೆ ಮನನೊಂದ ರೈತ ನಾಡಕಚೇರಿಯಲ್ಲಿಯೇ ಕ್ರಿಮಿನಾಶಕ ನ್ಯಾನೋ ಗೊಬ್ಬರ (ಲಿಕ್ವಿಡ್) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಬೆಳ್ಳೇರಿ ಗ್ರಾಮದ ಸಿದ್ದನಗೌಡ ರುದ್ರಗೌಡ ಹಿರೇಗೌಡ್ರ (65) ಆತ್ಮಹತ್ಯೆಗೆ ಯತ್ನಿಸಿದ ರೈತ. ಬೆಳ್ಳೇರಿಯಲ್ಲಿ 2.38 ಎಕರೆ ಜಮೀನು ಹೊಂದಿರುವ ಸಿದ್ದನಗೌಡ ಮುಂಗಾರು ಹಂಗಾಮಿನಲ್ಲಿ ಸಾವಿರಾರು ರೂ. ಖರ್ಚು ಮಾಡಿ ಈರುಳ್ಳಿ, ಗೋವಿನ ಜೋಳ ಬೆಳೆದಿದ್ದರು. ಆದರೆ, ವಾಡಿಕೆಗಿಂತ ಹೆಚ್ಚು ಮಳೆ, ಹಿರೇಹಳ್ಳ, ಮಲಪ್ರಭಾ ನದಿಯ ಪ್ರವಾಹದಿಂದ ಬೆಳೆಗಳೆಲ್ಲ ಹಾನಿಗೀಡಾಗಿದ್ದವು. ಹಾನಿ ಪ್ರದೇಶವನ್ನು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದರು.
ಆದರೆ, ಅಧಿಕಾರಿಗಳ ಎಡವಟ್ಟಿನಿಂದ ಸಿದ್ದನಗೌಡ ಅವರ ಜಮೀನಿನ ಬೆಳೆಹಾನಿ ಪರಿಹಾರದ ಎಂಟ್ರಿ ಆಗಿರಲಿಲ್ಲ. ಇದರಿಂದ ಸರ್ಕಾರದಿಂದ ಬೆಳೆಹಾನಿ ಪರಿಹಾರ ಬಂದಿರಲಿಲ್ಲ. ಮಾನಸಿಕವಾಗಿ ನೊಂದಿದ್ದ ಸಿದ್ದನಗೌಡ ಬುಧವಾರ ಕೊಣ್ಣೂರಿನ ನಾಡಕಚೇರಿಗೆ ಆಗಮಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಳಗೆ ಬಿದ್ದು ನರಳಾಡುತ್ತಿದ್ದ ಸಿದ್ದನಗೌಡ ಅವರನ್ನು ತಕ್ಷಣ ನರಗುಂದದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕರೆದೊಯ್ಯಲಾಯಿತು.
ತಹಸೀಲ್ದಾರ್ ಶ್ರೀಶೈಲ ತಳವಾರ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಗ್ರಾಮ ಲೆಕ್ಕಾಧಿಕಾರಿ ನೀರಜ್ ದೊಡಮನಿ, ಅನಿಲ ಭೋವಿ, ಇತರರು ನರಗುಂದದ ಸರ್ಕಾರಿ ತಾಲೂಕಾಸ್ಪತ್ರೆಗೆ ಭೇಟಿ ನೀಡಿ ರೈತನ ಆರೋಗ್ಯ ವಿಚಾರಿಸಿದರು.
ನರಗುಂದ ತಾಲೂಕಿನ ಎಲ್ಲ ರೈತರ ಬೆಳೆ ಹಾನಿ ಪ್ರದೇಶವನ್ನು ಈಗಾಗಲೇ ಜಂಟಿ ಸಮೀಕ್ಷೆ ನಡೆಸಲಾಗಿದೆ. ಯಾರಿಗಾದರೂ ಬೆಳೆ ಹಾನಿ ಪರಿಹಾರದ ಎಂಟ್ರಿ ಆಗದಿದ್ದರೆ ಅಂಥವರು ಮತ್ತೆ ಎಂಟ್ರಿ ಮಾಡಿಸಲು ಅವಕಾಶವಿದೆ. ಜೀವ ಪ್ರತಿಯೊಬ್ಬರಿಗೂ ಅತ್ಯಮೂಲ್ಯ. ಸಮಸ್ಯೆಗಳಿದ್ದರೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುತ್ತೇವೆ. ಯಾರೊಬ್ಬರೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು.