ಅಕಾಲಿಕ ಮಳೆಯಿಂದ ಫಸಲು ರಕ್ಷಣೆಗಾಗಿ ತಾಡಪಾಲು ಹೊದಿಸಿರುವುದು.
ಲಕ್ಷ್ಮೇಶ್ವರ: ಪಟ್ಟಣ ಸೇರಿ ತಾಲೂಕಿನ ಹಲವೆಡೆ ಮಂಗಳವಾರ ಮಧ್ಯಾಹ್ನ ಜೋರಾದ ಗಾಳಿಯೊಂದಿಗೆ ಮಳೆ ಸುರಿದಿದ್ದರಿಂದ ರೈತರು ಫಸಲು, ಹೊಟ್ಟು-ಮೇವು ರಕ್ಷಣೆಗೆ ಪರದಾಡಿದರು.
ಸದ್ಯ ರೈತರು ಹಿಂಗಾರಿನ ಬೆಳೆಗಳಾದ ಕಡಲೆ, ಗೋಧಿ, ಕುಸುಬೆ, ಜೋಳದ ಒಕ್ಕಲು ನಡೆದಿದ್ದು ಏಕಾಏಕಿ ಸುರಿದ ಮಳೆಯಿಂದ ಫಸಲು ಗುಣಮಟ್ಟ ಕಳೆದುಕೊಳ್ಳುವಂತಾಗಿದೆ. ಒಕ್ಕಲು ಕಾರ್ಯದಲ್ಲಿದ್ದ ರೈತರು ರಕ್ಷಣೆಗಾಗಿ ಪರದಾಡಿದರು. ಇನ್ನು ಬಿಡುವಿಲ್ಲದ ಕೃಷಿ ಕೆಲಸ, ಹಬ್ಬ, ಜಾತ್ರೆ, ಮದುವೆ ಅನೇಕ ಕಾರ್ಯಗಳಿಂದ ಹೊಲದಲ್ಲಿಯೇ ಗೂಡು/ಬಣವೆ ಹಾಕಿದ್ದ ಶೇಂಗಾ, ತೊಗರಿ, ಕಡಲೆ ಹೊಟ್ಟು, ಮೇವು ಮಳೆಗೆ ತೊಯ್ದು ಮೇಲ್ಪದರದ ಒಂದಷ್ಟು ಹೊಟ್ಟು ಹಾಳಾಗುತ್ತದೆ. ಹತ್ತಿ ಬೆಳೆ ಮಣ್ಣು ಪಾಲಾಗುತ್ತಿದೆ, ರೈತರು ಫಸಲು ರಕ್ಷಣೆಗೆ ತಾಡಪತ್ರಿಗಳ ಹೊದಿಕೆ ಕಾರ್ಯದಲ್ಲಿ ತಲ್ಲೀನರಾಗಿದ್ದರು.
ಇನ್ನೂ ಹಿಂಗಾರಿನ ಬೆಳೆಗಳ ಒಕ್ಕಲು ಕಾರ್ಯ ಸಾಕಷ್ಟಿದ್ದು ಕಳೆದ 2 ದಿನಗಳಿಂದ ಮಳೆಯ ವಾತಾವರಣ, ಗಾಳಿ ರೈತರನ್ನು ಚಿಂತೆಗೀಡು ಮಾಡಿದೆ. ರೈತರು ತಾಡಪತ್ರಿಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ.
ಸದ್ಯ ಒಕ್ಕಲು ಹಂತದಲ್ಲಿರುವ ಹಿಂಗಾರಿನ ಬೆಳೆಗಳು, ಹೊಟ್ಟು-ಮೇವು ಮಳೆಗೆ ಹಾಳಾಗುತ್ತಿದೆ. ಸದ್ಯ ಹೊಲದಲ್ಲಿಯೇ ಜಾನುವಾರುಗಳೊಂದಿಗೆ ಬೀಡು ಬಿಟ್ಟು ಸುಗ್ಗಿ ಸಂಭ್ರಮದಲ್ಲಿರುವ ರೈತರಿಗೆ ಅಕಾಲಿಕ ಮಳೆ ಸಂಕಷ್ಟ ತಂದೊಡ್ಡಿದೆ ಎಂದು ರೈತ ಚನ್ನಪ್ಪ ಷಣ್ಮುಕಿ ಅಲವತ್ತುಕೊಂಡರು.