ಗಜೇಂದ್ರಗಡ ಪಟ್ಟಣದಲ್ಲಿ ಆಯೋಜಿಸಿದ್ದ ಮರ್ಹೂಮ್ ಯು.ಟಿ. ಫರೀದ್ ಅವರ ಸ್ಮರಣಾರ್ಥ 2024ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಉರ್ದು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ ಮಾತನಾಡಿದರು. 
ಗದಗ

Education ಅಸಮಾನತೆ ವಿರುದ್ಧ ಹೋರಾಟಕ್ಕೆ ಶಿಕ್ಷಣವೇ ಅಸ್ತ್ರ

ಗಜೇಂದ್ರಗಡ: ಶಿಕ್ಷಣವೇ Education ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಶಾಶ್ವತ ಪ್ರಗತಿಗೆ ಮೂಲಮಂತ್ರ ಎಂದು ವಿಧಾಸಭೆ ಸ್ಪೀಕರ್ ಯು.ಟಿ. ಖಾದರ ಹೇಳಿದರು.
ಪಟ್ಟಣದ ರೋಣ ರಸ್ತೆಯಲ್ಲಿರುವ ಶ್ರೀ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮರ್ಹೂಮ್ ಯು.ಟಿ. ಫರೀದ್ ಅವರ ಸ್ಮರಣಾರ್ಥ 2024ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಉರ್ದು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಬಡತನ, ಅಜ್ಞಾನ ಮತ್ತು ಅಸಮಾನತೆಗಳ ವಿರುದ್ಧ ಹೋರಾಟಕ್ಕೆ ಶಿಕ್ಷಣವೇ ಪರಿಣಾಮಕಾರಿ ಅಸ್ತ್ರವಾಗಿದೆ. ಪಾಲಕರು ಮಕ್ಕಳ ಭವಿಷ್ಯದ ಕುರಿತು ತಾತ್ಕಾಲಿಕ ಲಾಭದ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳದೆ, ದೀರ್ಘಕಾಲೀನ ಬದುಕಿನ ದೃಷ್ಟಿಕೋನದಿಂದ ಯೋಚಿಸಬೇಕು. ಪಿಯುಸಿ ಹಂತದಲ್ಲೇ ಮಕ್ಕಳನ್ನು ಕೆಲಸಕ್ಕೆ ಸೇರಿಸುವ ಪ್ರವೃತ್ತಿ ಅವರ ಪ್ರತಿಭೆ ಮತ್ತು ಕನಸುಗಳನ್ನು ಕುಗ್ಗಿಸುವ ಅಪಾಯ ಹೊಂದಿದೆ. ಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾಗಿರಬಾರದು. ಅವರಿಗೆ ಮೌಲ್ಯಾಧಾರಿತ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯತೆಯ ಅರಿವು ಬೆಳೆಸಬೇಕು ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಯು.ಟಿ. ಖಾದರ್ ಅವರ ಸರಳತೆ, ಸಾಮಾಜಿಕ ಕಾಳಜಿ ಹಾಗೂ ಪ್ರಗತಿಪರ ಚಿಂತನೆಗಳು ಶ್ಲಾಘನೀಯ. ಅವರಿಗೆ ಇನ್ನೂ ಉನ್ನತ ಸ್ಥಾನಮಾನ ದೊರೆಯಲಿ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಐ.ಜೆ. ಮ್ಯಾಗೇರಿ, ರಾಜೂರ ಎಂಬ ಪುಟ್ಟ ಗ್ರಾಮದ ಕಡು ಬಡತನದ ಹಿನ್ನೆಲೆಯಿಂದ ಹೊರಬಂದು ಇಂದು ಜೈಲರ್ ಹುದ್ದೆ ಹಾಗೂ ಸಾಹಿತ್ಯಿಕ ಗೌರವವನ್ನು ಪಡೆಯಲು ಶಿಕ್ಷಣವೇ ಕಾರಣವಾಗಿದೆ ಎಂದರು.
ಕನ್ನಡ ಉರ್ದು ಕವಿಗೋಷ್ಠಿಯಲ್ಲಿ ಮೊಹಮ್ಮದ್ ಅರ್ಷದ್ ಹಿರೇಹಾಳ, ಮುರ್ತುಜಾ ಬೇಗಂ ಕೊಡಗಲಿ, ಅನ್ವರ್ ಅಹ್ಮದ್ ವಣಗೇರಿ, ಖಾಝಿ ಶಬ್ಬಿರ್ ಅಹ್ಮದ್, ಶಬ್ಬಿರ್ ಮನ್ಸೂರಿ ಹಾಗೂ ಬಿ.ಎ. ಮುಹಮ್ಮದ್ ಅಲಿ ಅವರು ತಮ್ಮ ಕವಿತೆಗಳ ಮೂಲಕ ಸಾಹಿತ್ಯಾಸಕ್ತರಿಗೆ ಚಿಂತನೆಗೆ ದಿಕ್ಕು ನೀಡಿದರು.
ಸಮಾರಂಭದಲ್ಲಿ ಸಾಹಿತಿ ಹಾಗೂ ಜೈಲರ್ ಡಾ. ಐ.ಜೆ. ಮ್ಯಾಗೇರಿ ಅವರ ಜೈಲ್ ಡೈರಿ ಕೃತಿಗೆ ರಾಜ್ಯಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಎ.ಎಸ್. ಮಕಾನದಾರ, ಡಾ. ಹಸೀನಾ ಎಚ್. ಖಾದ್ರಿ, ಶಿಲ್ಪಾ ಮ್ಯಾಗೇರಿ, ಅಂಜುಮನ್ ಇಸ್ಲಾಂ ಕಮಿಟಿ ಚೇರ್ಮನ್ ಹಸನಸಾಬ ತಟಗಾರ, ಸಾಹಿತಿ ಬಿ.ಎ. ಕೆಂಚರಡ್ಡಿ, ಪುರಸಭೆ ಮಾಜಿ ಸದಸ್ಯರಾದ ಮುರ್ತುಜಾ ಡಾಲಾಯತ, ರಾಜು ಸಾಂಗ್ಲಿಕರ, ರಫೀಕ್ ತೋರಗಲ್ಲ, ಎಫ್.ಎಚ್.ಡಾಲಾಯತ. ಬಸವರಾಜ ಚನ್ನಿ, ಇತರರು ಇದ್ದರು.