ಸಕ್ಕರೆ, ಬೆಲ್ಲ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳ ದರ ನಿಧಾನವಾಗಿ ಗಗನಕ್ಕೇರುತ್ತಿದ್ದು, ಸಿಹಿ ಪದಾರ್ಥಗಳ ಬೆಲೆ ಕಹಿಯಾಗತೊಡಗಿದೆ
- ಏರುತ್ತಿರುವ ಸಕ್ಕರೆ, ಬೆಲ್ಲದ ರೇಟು
- ಹಬ್ಬದ ಸಂಭ್ರಮಕ್ಕೂ ಕುತ್ತು
ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಶ್ರಾವಣ ಮಾಸದ ಸಂಭ್ರಮ, ಹಬ್ಬಗಳ ಸಡಗರದ ನಡುವೆಯೇ ಅಗತ್ಯ ದಿನಸಿ ವಸ್ತುಗಳ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.
ಸಕ್ಕರೆ, ಬೆಲ್ಲ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳ ದರ ನಿಧಾನವಾಗಿ ಗಗನಕ್ಕೇರುತ್ತಿದ್ದು, ಸಿಹಿ ಪದಾರ್ಥಗಳ ಬೆಲೆ ಕಹಿಯಾಗತೊಡಗಿದೆ. ಕೇಂದ್ರ ಸರ್ಕಾರ ಬೆಲೆ ನಿಯಂತ್ರಿಸುವುದಾಗಿ ಹೇಳುತ್ತಿದ್ದರೂ ಚಿಲ್ಲರೆ ಕಿರಾಣಿ ಅಂಗಡಿಗಳಲ್ಲಿ ಕೆಜಿ ಸಕ್ಕರೆ, ಬೆಲ್ಲದ ದರ 70 ರೂ.ಗಿಂತ ಕೆಳಗಿಳಿಯುತ್ತಿಲ್ಲ. ಆದಾಯಕ್ಕಿಂತ ಖರ್ಚು ಹೆಚ್ಚುತ್ತಿರುವ ಈ ದಿನಗಳಲ್ಲಿ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಜಾಸ್ತಿಯಾಗಿಸಿದೆ.
ಶ್ರಾವಣ ಮಾಸದಲ್ಲಿ ಧಾರ್ಮಿಕ ಆಚರಣೆಗಳು, ಪೂಜೆ, ವ್ರತ ಹಾಗೂ ಹಬ್ಬಗಳಿಗೆ ಸಿಹಿ ಪದಾರ್ಥಗಳ ಬಳಕೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಇದೇ ಸಂದರ್ಭದಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆಯಾಗಿರುವುದು ಕುಟುಂಬಗಳ ಬಜೆಟ್‌ಗೆ ಹೊಡೆತ ನೀಡಿದೆ. ಚಹಾ ಪುಡಿ ಸೇರಿದಂತೆ ನಿತ್ಯದ ಸಣ್ಣಪುಟ್ಟ ಅಗತ್ಯ ವಸ್ತುಗಳ ಬಳಕೆಯಲ್ಲಿಯೂ ಖರ್ಚು ಹೆಚ್ಚಾಗುತ್ತಿದೆ. ಬಡ ಕುಟುಂಬಗಳು ಅಗತ್ಯ ವಸ್ತುಗಳ ಖರೀದಿಗೂ ಲೆಕ್ಕ ಹಾಕುವಂತಾಗಿದೆ.
ಕಳೆದ ಎರಡು ವರ್ಷಗಳಿಂದ ಕೃಷಿ ವಲಯವೂ ಸಂಕಷ್ಟದಲ್ಲಿದೆ. ಕಳೆದ ಬಾರಿ ಅತಿ ಮಳೆಯಿಂದ ಬೆಳೆ ಹಾನಿಯಾಗಿದ್ದರೆ, ಈ ಬಾರಿ ಮುಂಗಾರು ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಳಿದುಳಿದ ಬೆಳೆಗೂ ಮಾರುಕಟ್ಟೆಯಲ್ಲಿ ಸೂಕ್ತ ದರ ಸಿಗುತ್ತಿಲ್ಲ. ಮತ್ತೊಂದೆಡೆ ಕೃಷಿ ಕೂಲಿ ಕಾರ್ಮಿಕರಿಗೂ ನಿರಂತರ ದುಡಿಮೆ ಇಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರ ಕೈಯಲ್ಲಿ ಹಣದ ಹರಿವು ಕುಂಠಿತವಾಗಿರುವ ಹೊತ್ತಿನಲ್ಲೇ ದಿನಸಿ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಉಳ್ಳಾಗಡ್ಡಿ ಈಗಾಗಲೇ 50 ರೂ. ಗಡಿ ದಾಟಿಯಾಗಿದೆ. ಮಳೆಯ ಕೊರತೆ ಹೀಗೆಯೇ ಮುಂದುವರಿದರೆ ತರಕಾರಿ ಸೇರಿದಂತೆ ಇತರ ಆಹಾರ ಪದಾರ್ಥಗಳ ದರವೂ ಮತ್ತಷ್ಟು ಏರುವ ಆತಂಕ ಕಾಡುತ್ತಿದೆ. ಮಾರುಕಟ್ಟೆಗೆ ಹೋದಾಗಲೆಲ್ಲ ಹೊಸ ದರ ಕೇಳಬೇಕಾಗಿದೆ ಎಂಬುದು ನಿತ್ಯ ದುಡಿದು ಬದುಕುವವರ ಅಳಲು.
ಹೀಗಿದೆ ಸದ್ಯದ ದರ:
ಸಕ್ಕರೆ (ಸಾಮಾನ್ಯ) ಕಿಲೋಕ್ಕೆ 60 ರೂ., ಬೆಲ್ಲ 70 ರೂ., ತೊಗರಿಬೇಳೆ 130, ಅಕ್ಕಿ 70ರಿಂದ 80, ಮಧ್ಯಮ ಅವಲಕ್ಕಿ 50, ದಪ್ಪ ಅವಲಕ್ಕಿ 50, ನವಲಗುಂದ ರವಾ 45, ದಪ್ಪ ರವಾ 45, ಅಡುಗೆ ಎಣ್ಣೆ ಲೀಟರ್‌ಗೆ 140 ರೂ.ಗಳಿಗೂ ಹೆಚ್ಚಿದೆ.
ಸರ್ಕಾರ ಕ್ರಮ ಕೈಗೊಳ್ಳಲಿ:
ಇದ್ದ ಆದಾಯದಲ್ಲೇ ಮನೆ ಬಾಡಿಗೆ, ಇಂಧನ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಖರ್ಚು ನಿಭಾಯಿಸಬೇಕಾಗಿದೆ. ಇದರ ನಡುವೆ ಆಹಾರ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಬದುಕು ದುಸ್ತರಗೊಳಿಸುತ್ತಿದೆ. ನಿತ್ಯ ದುಡಿಯುವವರ ಆದಾಯ ಗಮನದಲ್ಲಿಟ್ಟುಕೊಂಡು ಅಗತ್ಯ ಆಹಾರ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಹಕರ ಆಗ್ರಹವಾಗಿದೆ.
ಸತತ ಎರಡು ವರ್ಷಗಳಿಂದ ಬೆಳೆ ಕಳೆದುಕೊಳ್ಳುತ್ತ ಬಂದಿದ್ದೇವೆ. ಅಳಿದುಳಿದ ಬೆಳೆಗೆ ಬೆಲೆಯೂ ಇಲ್ಲ. ಆದಾಯ ಕಡಿಮೆ, ಖರ್ಚು ಜಾಸ್ತಿ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿದರೆ ಬಡವರು ಜೀವನ ನಡೆಸುವುದು ಹೇಗೆ? ಆದ್ದರಿಂದ, ಸರ್ಕಾರ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಮುಂದಾಗಬೇಕು.
— ನಿಂಗಪ್ಪ ಬೆಡಗಲ್ಲ ರೈತ, ನರೇಗಲ್ಲ