ನರಗುಂದ ತಾಲೂಕು ಸಂಪೂರ್ಣ ಬರಗಾಲ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ಗ್ರೇಡ್-2 ತಹಸೀಲ್ದಾರ್ ಪಿ.ಸಿ. ಕಲಾಲ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಶಂಕರ ಅಂಬಲಿ, ಬಸವರಾಜ ಸಾಬಳೆ, ವಿಠ್ಠಲ ಜಾಧವ, ಉಮೇಶ ಮರ್ಚಪ್ಪನವರ, ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ನರಗುಂದ
ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ತಕ್ಷಣವೇ ಸಮರ್ಪಕ ಬೆಳೆ ಪರಿಹಾರ, ಸಾಲದ ನೆರವು, ಜಾನುವಾರುಗಳ ಸುರಕ್ಷತೆ, ರಕ್ಷಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಮಹದಾಯಿಗಾಗಿ ಮಹಾವೇದಿಕೆ, ರಾಜ್ಯ ರೈತಸಂಘ, ಹಸಿರು ಸೇನೆ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ಪಿ.ಸಿ.ಕಲಾಲ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ರೈತ ಸಂಘದ ಅಧ್ಯಕ್ಷ ವಿಠ್ಠಲ ಜಾಧವ ಮಾತನಾಡಿ, ಜಿಲ್ಲೆಯ ನರಗುಂದ, ರೋಣ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗದಗ, ಗಜೇಂದ್ರಗಡ ಸೇರಿ ಒಟ್ಟು 7 ತಾಲೂಕುಗಳ ಪೈಕಿ ಕೇವಲ ಗಜೇಂದ್ರಗಡ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿರುವುದು ಖಂಡನೀಯ. ಗದಗ ಜಿಲ್ಲೆಯಾದ್ಯಂತ ಸಂಪೂರ್ಣ ಬರಗಾಲ ಆವರಿಸಿದ್ದು, ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯ ಮಳೆಮಾಪನ ಕೇಂದ್ರಗಳು ತಂತ್ರಾಂಶದಿಂದ ಕೂಡಿದ್ದು, ಸರಿಯಾಗಿ ಕಾರ್ಯ ನಿರ್ವಹಿಸದೆ ತಪ್ಪಾಗಿ ಮಾಹಿತಿ ನೀಡಿರುತ್ತವೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಜಿಲ್ಲೆಯಾದ್ಯಂತ ಬರ ವೀಕ್ಷಣೆ ಮಾಡಿದಾಗ ಮಾಹಿತಿ ತಿಳಿಸಲಾಗಿದೆ ಎಂದರು.
ಮಹದಾಯಿಗಾಗಿ ಮಹಾವೇದಿಕೆ ಅಧ್ಯಕ್ಷ ಶಂಕರಪ್ಪ ಅಂಬಲಿ ಮಾತನಾಡಿ, ಗದಗ ಜಿಲ್ಲೆ ತೀವ್ರ ಬರಗಾಲ ಪೀಡಿತ ಎಂದು ಘೋಷಿಸಿ, ರೈತರಿಗೆ ಪರಿಹಾರ, ಬೆಳೆ ವಿಮೆ, ಮಹದಾಯಿ, ಕಳಸಾ, ಬಂಡೂರಿ ಯೋಜನೆ ಜಾರಿಗೊಳಿಸಲು ಶ್ರಮಿಸಬೇಕು. ಕಳಸಾ, ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವವರೆಗೂ ತಮ್ನಾರ ವಿದ್ಯುತ್ ಯೋಜನೆಗೆ ಅನುಮತಿ ನೀಡಬಾರದು. ಗದಗ ಜಿಲ್ಲೆಯ 5 ತಾಲೂಕು, ಧಾರವಾಡ ಜಿಲ್ಲೆಯ 5 ತಾಲೂಕು, ಬೆಳಗಾವಿ ಜಿಲ್ಲೆಯ 3 ತಾಲೂಕು ಬಾಗಕೋಟೆಯ 3 ತಾಲೂಕು ತೀವ್ರ ಬರ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ರೈತ ಸಂಘ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ, ಉಮೇಶ ಮರ್ಚಪ್ಪನವರ, ಚನ್ನಬಸಪ್ಪ ನಂದಿ, ಸಿದ್ದನಗೌಡ ಮರಿಗೌಡ್ರ, ದೇವಪ್ಪ ಬಂಗಾರಿ, ಮನೋಹರ ಹುಯಿಲಗೋಳ, ರೆಹಮಾನಸಾಬ ಅಲ್ಲಿಬಾಯಿ, ಬುಡ್ನೆಸಾಬ ಮಿಯಾಖಾನವರ, ಹನಮಂತಗೌಡ ಯಲ್ಲಪ್ಪಗೌಡ್ರ, ಶಂಕರಗೌಡ ಪಾಟೀಲ, ಶಿವಬಸಪ್ಪ ಹಲಗತ್ತಿ ಇತರರಿದ್ದರು.