ಲಕ್ಷ್ಮೇಶ್ವರ: ತಾಲೂಕಿನ ಗೊಜನೂರು ಗ್ರಾಮದ ಸರ್ಕಾರಿ ಗೋಮಾಳ (ಗಾಯರಾಣ) ಜಮೀನನ್ನು ಮೈಸೂರು ಮರ್ಚಂಟೈಲ್ಸ್ ಲಿ. ಕಂಪನಿಗೆ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಸರ್ಕಾೃದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಕುರಿತು ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಮೀನು ಹಸ್ತಾಂತರ ಪ್ರಕ್ರಿಯೆ ಕೈಬಿಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು, ಸರ್ಕಾರಿ ಗೋಮಾಳವನ್ನು ಖಾಸಗಿ ಕಂಪನಿಗೆ ನೀಡುವುದರಿಂದ ಗ್ರಾಮಸ್ಥರು ಹಾಗೂ ಜಾನುವಾರು ಸಾಕಾಣಿಕೆದಾರರಿಗೆ ತೊಂದರೆಯಾಗಲಿದೆ ಎಂದು ಆಕ್ಷೇಪಿಸಿದರು. ಗೊಜನೂರು ಗ್ರಾಮದ ರಿ.ಸ.ನಂ.214/1ರಲ್ಲಿ 207 ಎಕರೆ 21 ಗುಂಟೆ ಹಾಗೂ ರಿ.ಸ.ನಂ.215ರಲ್ಲಿ 33 ಎಕರೆ 1 ಗುಂಟೆ ಜಮೀನು ಇದ್ದು, ಕಂದಾಯ ದಾಖಲೆಗಳಲ್ಲಿ ಗೊಜನೂರು ಮೊಪತ್ ಗಾಯರಾಣ (ಗೋಮಾಳ) ಎಂದು ನಮೂದಾಗಿದೆ. ಗ್ರಾಮದಲ್ಲಿನ ಜಾನುವಾರುಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ಕುರಿಗಾಹಿಗಳು ದನಕರು, ಕುರಿ, ಆಡುಗಳನ್ನು ಮೇಯಿಸಲು ಈ ಪ್ರದೇಶವನ್ನು ಅವಲಂಬಿಸಿದ್ದಾರೆ.
ಈ ಹಿಂದೆ ರಿ.ಸ.ನಂ.214/1ರ 4 ಎಕರೆ ಹಾಗೂ ರಿ.ಸ.ನಂ.215ರ 16 ಎಕರೆ 31 ಗುಂಟೆ ಸೇರಿದಂತೆ ಸುಮಾರು 20 ಎಕರೆ ಜಮೀನನ್ನು ಮೈಸೂರು ಮರ್ಚಟೈಲ್ ಕಂಪನಿಗೆ ಲೀಸ್‌ಗೆ ನೀಡಲಾಗಿತ್ತು. ಆದರೆ, ಕಂಪನಿ ಲೀಸ್ ಪಡೆದಿರುವ ಜಮೀನಿಗಿಂತ ಹೆಚ್ಚಿನ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದೆ. ಲೀಸ್ ನೀಡಿರುವ ಜಮೀನಿನ ಸಮಗ್ರ ಸರ್ವೇ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು. ಈ ಬಗ್ಗೆ ಗ್ರಾಮಸ್ಥರು ತಕರರು ಅರ್ಜಿ ಸಲ್ಲಿಸಿದ್ದೇವೆ. ಸರ್ಕಾರಿ ಗೋಮಾಳದ ಉಳಿದ ಜಮೀನನ್ನು ಖಾಸಗಿ ಕಂಪನಿಗೆ ಮಾರಾಟ ಅಥವಾ ಹಸ್ತಾಂತರ ಮಾಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗೊಜನೂರು ಗ್ರಾಮಸ್ಥರ ಮನವಿಯ ಆಧಾರದ ಮೇಲೆ ಉಪ ವಿಭಾಗಾಧಿಕಾರಿ ಕಚೇರಿಯ ಎಲ್‌ಎನ್‌ಡಿ ವಹಿ 17/2023-24ಕ್ಕೆ ಸಂಬಂಧಿಸಿದ ಜಮೀನು ಹಸ್ತಾಂತರ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಶ್ರೀಧರ ಸಿ.ಎನ್, ‘ಈ ಕುರಿತು ಸ್ಥಳೀಯ, ತಾಲೂಕು ಮಟ್ಟದ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ’ ಎಂದರು.
ಎಸ್.ಪಿ. ಪಾಟೀಲ, ಎಂ.ಎಸ್. ದೊಡ್ಡಗೌಡರ, ಎಸ್.ಡಿ. ಪಾಟೀಲ, ಮಾಂತಗೌಡ ಪಾಟೀಲ, ಮಾಂತೇಶ ಪ್ರಭಯ್ಯನಮಠ, ಬಸವರಾಜ ಸಂಶಿ, ಮಂಜುನಾಥ ಛಲವಾದಿ, ರಮೇಶ ದನದಮನಿ, ಮಂಜುನಾಥ ಮಾಗಡಿ, ಚನ್ನಪ್ಪ ಷಣ್ಮುಕಿ, ಹೊನ್ನಪ್ಪ ವಡ್ಡರ, ನಿಂಬಣ್ಣ ಮಡಿವಾಳರ, ಚೇತನ ಕಣವಿ, ಮುತ್ತಪ್ಪ ನಡ್ಲಮನಿ, ನಿಂಗನಗೌಡ ಪಾಟೀಲ, ಪಂಚಾಕ್ಷರಿ ಸವಣೂರ, ಮಂಜುನಾಥ ಕಣವಿ, ಮುತ್ತಣ್ಣ ಕಲ್ಲೂರ, ರಾಜು ಕಿತ್ಲಿ, ಶಿವರಾಜಗೌಡ ಪಾಟೀಲ, ಬಸನಗೌಡ ಪಾಟೀಲ, ಮಲ್ಲನಗೌಡ ದೊಡ್ಡಗೌಡರ ಇತರರು ಇದ್ದರು.