ಉತ್ತಮ ಮಳೆಯಾಗಿ ಬೆಳೆ ಬರಲಿ ಎಂದು ಗಜೇಂದ್ರಗಡದ ಎ.ಪಿ.ಎಂ.ಸಿ. ಆವರಣದಲ್ಲಿರುವ ಶ್ರೀ ಮಾರುತೇಶ್ವರ ಹಮಾಲರ ಸಂಘದ ವತಿಯಿಂದ ಸಂಪ್ರದಾಯಬದ್ಧವಾಗಿ ಸೋಮವಾರ ಕತ್ತೆಗಳ ಮದುವೆ ಮಾಡಲಾಯಿತು. 
ಗದಗ

ಮಳೆಗಾಗಿ ಕತ್ತೆಗಳಿಗೆ ಮದುವೆ: donkey marraige

ಮಂಜುನಾಥ ಗದಗಿನ
ಗಜೇಂದ್ರಗಡ: ಪುರೋಹಿತರಿದ್ದರು, ಹೆಣ್ಣು-ಗಂಡಿನ ಕಡೆಯವರ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ವಧು-ವರರರಿಗೆ ಹಾರೈಸಲು ಬಂದ ಅತಿಥಿಗಳಿಗೆ ಭರ್ಜರಿ ಭೋಜನವನ್ನೂ ಉಣ ಬಡಿಸಲಾಯಿತು.
ಇದು ಯಾವುದೇ ಶ್ರೀಮಂತ ಮನೆತನದ ಮದುವೆಯಲ್ಲ. ಸಮರ್ಪಕ ಮಳೆಯಾಗಿ ಬೆಳೆ ಬರಲಿ ಎಂದು ಗಜೇಂದ್ರಗಡ ನಗರದ ಎ.ಪಿ.ಎಂ.ಸಿ. ಆವರಣದಲ್ಲಿರುವ ಶ್ರೀ ಮಾರುತೇಶ್ವರ ಹಮಾಲರ ಸಂಘದ ವತಿಯಿಂದ ಕತ್ತೆಗಳಿಗೆ ಮಾಡಿಸಿದ ಮದುವೆಯಲ್ಲಿ ಕಂಡು ಬಂದ ದೃಶ್ಯಗಳು...
ವಿವಾಹ ಕಾರ್ಯಕ್ರಮದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಕತ್ತೆಗಳಿಗೆ ಹೂಮಾಲೆ ಹಾಕಿ, ತಾಳಿ ಕಟ್ಟುವ ಸಂಪ್ರದಾಯವನ್ನು ಸಾಂಕೇತಿಕವಾಗಿ ನಡೆಸಲಾಯಿತು. ಬಳಿಕ ಮಂಗಳಾರತಿ ಬೆಳಗಿ, ದೇವರಲ್ಲಿ ಉತ್ತಮ ಮಳೆಯಾಗಲಿ, ರೈತರ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ಎಲ್ಲರ ಜೀವನ ಸುಖಮಯವಾಗಿರಲಿ ಎಂದು ಪ್ರಾರ್ಥಿಸಲಾಯಿತು.
ಈ ವೇಳೆ ಸಂಘದ ಮುಖಂಡ ವೀರಣ್ಣ ಸೊಬರದ ಮಾತನಾಡಿ, ಕಳೆದ ಕೆಲವು ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಲಿ ಎಂದು ಕತ್ತೆಗಳಿಗೆ ಮದುವೆ ಮಾಡಲಾಯಿತು. ಇದು ಕೇವಲ ಮೂಢನಂಬಿಕೆಯಲ್ಲ, ಜನಪದ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆಯ ಒಂದು ಭಾಗವಾಗಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಪರಶುರಾಮ ಡಂಬಳ, ಮಾಜಿ ಅಧ್ಯಕ್ಷ ಸಿದ್ದಪ್ಪ ಚಲವಾದಿ ಮಾತನಾಡಿದರು. ಪರಸಪ್ಪ ಕಟ್ಟಿಮನಿ, ಪವಾಡೆಪ್ಪ ಮ್ಯಾಗೇರಿ, ಪರಣ್ಣ ಕಡ್ಡಿ, ಶಿವಪ್ಪ ಸಂಗನಾಳ, ಜಗದೀಶ ಕಲ್ಗುಡಿ, ಶಂಕರಯ್ಯ ಹುಲಕಂತಿಮಠ, ಮಲ್ಲಿಕಾರ್ಜುನ ಗೌಡರ, ಅಮರೇಶ ಬಳಿಗೇರ, ಶೇಖಣ್ಣ ಚಿತ್ರಗಾರ, ಶ್ರೀಕಾಂತ ಡೊಳ್ಳಿನ, ರವಿ ಪವಾರ, ಮಂಜುನಾಥ ಸಂಗನಾಳ, ನರಸಪ್ಪ ಕುಷ್ಟಗಿ, ಬಸವರಾಜ ಕುಷ್ಟಗಿ, ಕುಮಾರ ಸಂಗಮದ, ವೀರೇಶ ಗೌರಿಮಠ, ಶರಣಪ್ಪ ಕುಂಬಾರ, ಬಸವರಾಜ ಸುರಕೋಡ, ರವಿ ಕಲಾಲ, ಸುರೇಶ ಕಾರಾಬಾರಿ, ಯಲ್ಲಪ್ಪ ಕದಡಿ, ಶೇಖಪ್ಪ ಕಲಾಲ, ಮುತ್ತಣ್ಣ ಸಂಗಮದ ಸೇರಿದಂತೆ ವರ್ತಕರು, ಹಮಾಲರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.