ಲಕ್ಷ್ಮೇಶ್ವರದ ಲಂಡಿ ಹಳ್ಳ ಮತ್ತು ಪಟ್ಟಣದ ಒಳಚರಂಡಿ ನೀರನ್ನು ಡೀಸೆಲ್ ಪಂಪ್‌ಸೆಟ್ ಮೂಲಕ ಹೊಲಗಳಿಗೆ ಹರಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ರೈತರು.
- ಆತಂಕಕಾರಿ ಬೆಳವಣಿಗೆಗೆಗ ಜನರ ಶಾಕ್
- ಕೈಕೊಟ್ಟ ಮಳೆಯಿಂದ ರೈತರಿಂದ ಈ ತಂತ್ರ
- ಕೊಳಚೆ ನೀರಿಗೆ ಮೊರೆ
ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ರೋಹಿಣಿ ಮಳೆಗೆ ಬಿತ್ತನೆ ಮಾಡಿರುವ ಬೆಳೆಗಳಿಗೆ ಮೃಗಶಿರ ಮಳೆ ಸಂಪೂರ್ಣ ಕೈಕೊಟ್ಟಿದ್ದು, ಆರಿದ್ರ ಮಳೆ ಅರ್ಧಗಳೆದರೂ ಭೂಮಿಗೆ ಇಳೆಯುತ್ತಿಲ್ಲ. ಒಂದು ತಿಂಗಳ ಅವಧಿಯ ಎಳೆಯ ಬೆಳೆಗಳೆಲ್ಲ ಒಣಗುತ್ತಿರುವುದನ್ನು ತಡೆದು ರಕ್ಷಿಸಿಕೊಳ್ಳಲು ರೈತ ಸಮುದಾಯ ಇದೀಗ ಕೊಳಚೆ ನೀರಿಗೆ ಮೊರೆ ಹೋಗಿದ್ದು, ಇದು ಆತಂಕಕಾರಿ ಬೆಳೆವಣಿಗೆಯಾಗಿದೆ.
ಹೌದು, ಲಕ್ಷ್ಮೇಶ್ವರ ಪಟ್ಟಣದ ಲಂಡಿ ಹಳ್ಳದ ಅಕ್ಕಪಕ್ಕದ ಜಮೀನುಗಳಿಗೆ ಕೆಲ ರೈತರು ಲಂಡಿ ಹಳ್ಳದಲ್ಲಿ ಹರಿಯುತ್ತಿರುವ ಕೊಳಚೆ ನೀರನ್ನೇ ಡೀಸೆಲ್ ಪಂಪ್‌ಸೆಟ್‌ಗಳ ಮೂಲಕ ಹೊಲಗಳಿಗೆ ಹರಿಸುತ್ತಿದ್ದರೆ, ಇನ್ನೂ ಕೆಲವರು ಪಟ್ಟಣದ ಒಳಚರಂಡಿಯ ನೀರನ್ನು ನೂರಾರು ಮೀಟರ್ ದೂರದ ಜಮೀನುಗಳಿಗೆ ಪೈಪ್ ಅಳವಡಿಸಿ ಸಾಗಿಸುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆಯೇ ನಮ್ಮನ್ನು ಈ ಪರಿಸ್ಥಿತಿಗೆ ತಳ್ಳಿದೆ ಎನ್ನುತ್ತಾರೆ ರೈತರಾದ ಬಸವರಾಜ ಆದಿ, ಎಂ.ಎನ್ ಹವಳದ ಮತ್ತಿತರರು.
ಪ್ರತಿ ದಿನ ಡೀಸೆಲ್‌ಗೆ ಸಾವಿರಾರು ರೂಪಾಯಿ ವೆಚ್ಚ, ಪೈಪ್ ಅಳವಡಿಕೆಯ ಖರ್ಚು, ಟ್ಯಾಂಕರ್ ಬಾಡಿಗೆ ಇವೆಲ್ಲವನ್ನು ಭರಿಸುತ್ತಿದ್ದರೂ ಬೆಳೆ ಉಳಿಯುತ್ತದೆಯೇ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಬಿತ್ತನೆ, ಗೊಬ್ಬರ, ಬೀಜ ಹಾಗೂ ಔಷಧಗಳಿಗೆ ಮಾಡಿದ ಹೂಡಿಕೆ ಕಣ್ಣೆದುರೇ ಮಣ್ಣಾಗುವ ಭೀತಿಯಲ್ಲಿ ಅನ್ನದಾತರು ಬದುಕುತ್ತಿದ್ದಾರೆ.
ಬೆಳೆ ಉಳಿಸಿಕೊಳ್ಳಲು ಹರಸಾಹಸ: ಮುಂಗಾರಿನ ಪ್ರಮುಖ ಬೆಳೆಗಳಾದ ಹೆಸರು, ಗೋವಿನಜೋಳ, ಶೇಂಗಾ, ಉಳ್ಳಾಗಡ್ಡಿ ಇತರ ಬೆಳೆಗಳು ತೇವಾಂಶದ ಕೊರತೆಯಿಂದ ನಲುಗುತ್ತಿವೆ. ಮಳೆರಾಯನ ಕೃಪೆಗಾಗಿ ರೈತರು ಸಾಂಪ್ರದಾಯಿಕ ಕಪ್ಪೆ ಮದುವೆ, ಹೊಂಡದ ಪೂಜೆ, ಗುರ್ಜಿಪೂಜೆ, ಜಲಾಭಿಷೇಕ, ಪರವು, ವೃತಾಚರಣೆ, ಪ್ರಸಾದ ಸೇವೆ ಮಾಡುತ್ತಿದ್ದಾರೆ. ನೀರಾವರಿ ಸೌಲಭ್ಯ ಹೊಂದಿರುವ ಕೆಲವೇ ರೈತರು ಬೋರ್‌ವೆಲ್ ನೀರಿನತ್ತ ಚಿತ್ತ ಹರಿಸಿದ್ದರೆ ಮಳೆಯನ್ನೇ ನಂಬಿರುವ ಬಹುತೇಕ ರೈತರು ಮುಗಿಲಿನತ್ತ ಚಿತ್ತ ಹರಿಸಿ ಚಾತಕ ಪಕ್ಷಿಯಂತೆ ಮಳೆಗಾಗಿ ಕಾಯುತ್ತಿದ್ದಾರೆ. ನಿತ್ಯ ಗೂಗಲ್ ಕೃಷಿಯನ್ನೇ ಬದುಕಾಗಿಸಿಕೊಂಡ ರೈತರು ಮಳೆ ಬರುತ್ತದೆ ಎಂಬ ಆಶಾಭಾವನೆಯೊಂದಿಗೆ ಕಣ್ಣ ಮುಂದೆಯೇ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.
ತಾಲೂಕಿನಲ್ಲಿನ ಒಟ್ಟು 32500 ಬಿತ್ತನೆ ಕ್ಷೇತ್ರದಲ್ಲಿ ಈಗಾಗಲೇ ಶೇ.90ರಷ್ಟು ರೈತರು ಬಿತ್ತನೆ ಮಾಡಿದ್ದಾರೆ. ಇದರಲ್ಲಿ ಶೇ.94ರಷ್ಟು ಕ್ಷೇತ್ರ ಮಳೆಯಾಶ್ರಿತವಾಗಿದೆ. ಜೂನ್ ಪ್ರಾರಂಭದಿಂದ ಇಲ್ಲಿಯವರೆಗೂ ಹನಿ ಮಳೆಯೂ ಆಗಿಲ್ಲ. ಬದಲಾಗಿ 30ರಿಂದ 35 ಡಿ.ಸೆ ಬಿಸಿಲ ತಾಪಕ್ಕೆ ಬೆಳೆ ನೆಲಕ್ಕೊರಗುತ್ತಿವೆ. ಬೀಜ, ಗೊಬ್ಬರ, ಬಿತ್ತನೆ ಖರ್ಚು ಸೇರು ಎಕರೆಗೆ ಕನಿಷ್ಠ 10-15 ಸಾವಿರ ರೂ. ಖರ್ಚು ಮಾಡಿದ್ದು ಕೃಷಿ ಮಾನ್ಸೂನ್ ಮಳೆಯೊಂದಿಗಿನ ಜೂಜಾಟವೇ ಆಗಿದೆ ಎಂಬ ಹೇಳಿಕೆ ಪರಿಸ್ಥಿತಿಯನ್ನು ಸಾಕ್ಷಿಕರಿಸುತ್ತದೆ.
ವಾರದೊಳಗೆ ಉತ್ತಮ ಮಳೆಯಾಗದಿದ್ದರೆ ಹೆಸರು, ಮೆಕ್ಕೆಜೋಳ, ಉಳ್ಳಾಗಡ್ಡಿ, ಹತ್ತಿ, ಮೆಣಸಿನಕಾಯಿ ಸೇರಿದಂತೆ ಮುಂಗಾರಿನ ಬಹುತೇಕ ಬೆಳೆಗಳು ಸಂಪೂರ್ಣ ಒಣಗಲಿವೆ. ಮತ್ತೆ ಬಿತ್ತನೆ ಮಾಡುವ ಪರಿಸ್ಥಿತಿ ಬಂದರೆ ಅದಕ್ಕೆ ಬೇಕಾದ ಹಣವೂ ನಮ್ಮ ಬಳಿ ಇಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
"
ತಿಂಗಳಿಂದ ಮಳೆ ಇಲ್ಲದೆ ಬಿತ್ತಿದ ಬೆಳೆ ಒಣಗುತ್ತಿದೆ. ಬ್ಯಾಂಕಿನ ಸಾಲ, ಕೈಗಡ ಸಾಲ ಬೆಳ್ಯಾಕಂತಾವ. ಮಕ್ಕಳ ಸಾಲಿ ಕಲಸೋದ ಹೆಂಗ.. ಬದುಕು ನಡಸೋದ ಹೆಂಗ.. ಎಲ್ ನೀನೋ ಹವಾಮಾನ ವೈಪರಿತ್ಯದಿಂದ ಬರಗಾಲ ಆವರಿಸಿದ್ದು, ಸರ್ಕಾರ ಬರಗಾಲ ಘೋಷಣೆ ಮಾಡಿ ಅಗತ್ಯ ಪರಿಹಾರ ಘೋಷಿಸಬೇಕು.
— ದೇವಣ್ಣ ಬಳಿಗಾರ, ಬಸಣ್ಣ ಬೆಂಡಗೇರಿ- ಪ್ರಗತಿಪರ ರೈತರು
ಜೂನ್ ತಿಂಗಳು ಮಳೆಯೇ ಆಗದ್ದರಿಂದ ಮೇ ಮೊದಲ ವಾರ ಮತ್ತು ಜೂನ್ ಪ್ರಾರಂಭದಲ್ಲಿ ಬಿತ್ತನೆ ಮಾಡಿರುವ ಬೆಳೆಗಳೆಲ್ಲ ಒಣಗುತ್ತಿವೆ. ಮಳೆ ಕೊರತೆ, ಸದ್ಯದ ಬೆಳೆಗಳ ಸ್ಥಿತಿಗತಿಯ ಬಗ್ಗೆ ಇಲಾಖೆಗೆ ಸಂಪೂರ್ಣ ವರದಿ ಸಲ್ಲಿಸಲಾಗಿದೆ. ರೈತರು ಬೆಳೆ ವಿಮೆ ಪಾವತಿಸಬೇಕು ಮತ್ತು ಬೆಳೆ ದೃಢೀಕರಣ ಮಾಡಿಕೊಳ್ಳಬೇಕು. ಬಿತ್ತನೆ ಮಾಡುವುದು, ಕ್ರಿಮಿನಾಶಕ, ಕಳೆನಾಶಕ, ರಸಗೊಬ್ಬರ ಬಳಕೆಯನ್ನು ನಿಲ್ಲಿಸಬೇಕು.
— ಚಂದ್ರಶೇಖರ ನರಸಮ್ಮನವರ, ಸಹಾಯಕ ಕೃಷಿ ಅಧಿಕಾರಿ