ನರಗುಂದ- ಭೈರನಹಟ್ಟಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು.
- ಭೈರನಹಟ್ಟಿ ಹೆದ್ದಾರಿಯಲ್ಲಿ ಲಾರಿ-ಕಾರು ಮುಖಾಮುಖಿ ಡಿಕ್ಕಿ
ನರಗುಂದ: ಲಾರಿ- ಕಾರು ಮುಖಾಮುಖಿ ಡಿಕ್ಕಿಯಾಗಿ ಜೈಲಿನ ವಾರ್ಡರ್ ಮೃತಪಟ್ಟ ಘಟನೆ ತಾಲೂಕಿನ ಭೈರನಹಟ್ಟಿ ರಸ್ತೆಯ ವೀರನಗೌಡ್ರ ಪೆಟ್ರೋಲ್ ಪಂಪ್ ಹತ್ತಿರದ ಸೇತುವೆ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆ ನೀರಲಗಿಯ ಸಂಗಪ್ಪ ರಂಗಪ್ಪ ಮಜ್ಜಗಿ (41) ಮೃತಪಟ್ಟವರು. ಧಾರವಾಡದ ಸಬ್ ಜೈಲಿನಲ್ಲಿ ವಾರ್ಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಗಪ್ಪ ಭಾನುವಾರ ಅಕ್ಕನ ಮಗಳ ನಿಶ್ಚಿತಾರ್ಥಕ್ಕೆ ಹುಬ್ಬಳ್ಳಿಯಿಂದ ನರಗುಂದ ಮಾರ್ಗವಾಗಿ ಬಾಗಲಕೋಟೆಗೆ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರು. ಈ ವೇಳೆ ಬಾಗಲಕೋಟೆಯಿಂದ ಹುಬ್ಬಳ್ಳಿಯತ್ತ ಅತೀ ವೇಗವಾಗಿ ತೆರಳುತ್ತಿದ್ದ ಕೇರಳದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಾರಿನಲ್ಲಿ ಸಿಲುಕಿದ್ದ ಸಂಗಪ್ಪ ಅವರ ಮೃತದೇಹವನ್ನು ಜೆಸಿಬಿ, ಕ್ರೇನ್ ಹಾಗೂ ಸಾರ್ವಜನಿಕರ ನೆರವಿನಿಂದ ಹೊರತೆಗೆಯಲಾಯಿತು.
ಧಾರವಾಡದ ಗುಲಗಂಜಿಕೊಪ್ಪ (ಗೌಡರ) ಓಣಿಯಲ್ಲಿ ವಾಸವಾಗಿದ್ದ ಜೈಲು ವಾರ್ಡರ್ ಸಂಗಪ್ಪ ತಾವೇ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ಕುರಿತು ಅವರ ಪತ್ನಿ ಪ್ರತಿಭಾ ಮಜ್ಜಗಿ ದೂರು ನೀಡಿದ್ದಾರೆ. ಕೇರಳ ಮೂಲದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.