ಬರಪೀಡಿತ ತಾಲೂಕುಗಳ ಎರಡನೇ ಪಟ್ಟಿಯಲ್ಲೂ ಮುಂಡರಗಿ ತಾಲೂಕನ್ನು ಕೈಬಿಟ್ಟಿರುವ ಕ್ರಮ ಖಂಡಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಶುಕ್ರವಾರ ಸಭೆ ನಡೆಸಿದರು. ವೈ.ಎನ್. ಗೌಡರ, ವೀರನಗೌಡ ಪಾಟೀಲ, ಶರಣಪ್ಪ ಕಂಬಳಿ, ಇತರಿದ್ದರು.
ಮುಂಡರಗಿ: ಬರಪೀಡಿತ (DROUGHT) ತಾಲೂಕುಗಳ ಎರಡನೇ ಪಟ್ಟಿಯಲ್ಲೂ ಮುಂಡರಗಿ ತಾಲೂಕನ್ನು ಕೈಬಿಟ್ಟಿರುವ ಸರ್ಕಾರದ ಕ್ರಮ ಖಂಡಿಸಿ ವಿವಿಧ ಗ್ರಾಮಗಳ ರೈತರು ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದ ಬಳಿಯ ಪುರಸಭೆ ಉದ್ಯಾನದಲ್ಲಿ ಸಭೆ ನಡೆಸಿ ಸೆ.25ರಂದು ಮುಂಡರಗಿ ಬಂದ್ ಮಾಡಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡರು.
ಮುಂಗಾರು ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿದೆ. ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗಿ ನಾಶವಾಗಿದೆ. ತಾಲೂಕನ್ನು ತೀವ್ರ ಬರಗಾಲ ಪ್ರದೇಶವೆಂದು ಘೋಷಿಸಲು ಒತ್ತಾಯಿಸುತ್ತಾ ಬಂದರೂ ಈವರೆಗೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಸರ್ಕಾರ 101 ತಾಲೂಕನ್ನು ಬರಪೀಡಿತ ಎಂದು ಘೋಷಿಸಿತ್ತು. ಎರಡನೇ ಹಂತದಲ್ಲಿ 23 ತಾಲೂಕನ್ನು ಘೋಷಿಸಲಾಗಿದೆ. ಎರಡನೇ ಹಂತದ್ಲಲಾದರೂ ತಾಲೂಕನ್ನು ತೀವ್ರ ಬರ ಪೀಡಿತ ಪ್ರದೇಶವೆಂದು ಘೋಷಿಸುವ ಭರವಸೆ ಹೊಂದಿದ್ದೆವು. ಈಗಲೂ ಘೋಷಿಸಿಲ್ಲ. ಗ್ರೌಂಡ್ ಟ್ರೂಥಿಂಗ್‌ಗೆ ಆಯ್ಕೆ ಮಾಡಿದ ತಾಲೂಕಿನಲ್ಲೂ ಮುಂಡರಗಿ ತಾಲೂಕಿನ ಹೆಸರು ಸಹ ಇಲ್ಲ. ಹೀಗಾಗಿ ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮುಂಡರಗಿ ತಾಲೂಕು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಸೆ.25ರಂದು ರೈತ ಸಂಘಟನೆಗಳು, ವಿವಿಧ ಸಂಘಟನೆಗಳು ಸೇರಿ ಮುಂಡರಗಿ ಬಂದ್ ಮಾಡಿ ಬೃಹತ್ ಹೋರಾಟ ಮಾಡುವುದರ ಬಗ್ಗೆ ಸಭೆಯಲ್ಲಿ ರೈತರು ತೀರ್ಮಾನ ಮಾಡಿದರು.
ವೈ.ಎನ್.ಗೌಡರ, ವೀರನಗೌಡ ಪಾಟೀಲ, ಶರಣಪ್ಪ ಕಂಬಳಿ, ರವಿ ಕೊಳಲು, ಬಸವರಾಜ ನವಲಗುಂದ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಗುಡದಪ್ಪ ದೇಸಾಯಿ, ಅಶೋಕ ಸೀಗೆನಹಳ್ಳಿ, ದೇವಪ್ಪ ಚಿಕ್ಕಣ್ಣವರ, ಎಚ್.ಬಿ. ಕುರಿ, ಸೋಮನಗೌಡ ಗೌಡರ, ಚಂದ್ರಪ್ಪ ಗದ್ದಿ, ಮುತ್ತು ಬಳ್ಳಾರಿ, ಮಾಬುಸಾಬ ಬಳ್ಳಾರಿ, ಚಂದ್ರಪ್ಪ ಬಳ್ಳಾರಿ, ರಂಜಿತ್ ಮಧ್ಯಪಾಟಿ ಇತರರು ಇದ್ದರು.