demand ಲಕ್ಷ್ಮೇಶ್ವರದ ಪುರಸಭೆ ವಾಣಿಜ್ಯ ಮಳಿಗೆಗಳ ಮರು ಟೆಂಡರ್‌ಗೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಾಹೇಖಲಾಲ ಕಲೆಗಾರ, ಮಾಂತೇಶ ಶರಸೂರಿ, ಲೋಕೇಶ ಶರಸೂರಿ, ಭರಮಣ್ಣ ಶರಸೂರಿ, ಇತರರಿದ್ದರು. 
ಗದಗ

Demand ವಾಣಿಜ್ಯ ಮಳಿಗೆ ಮರು ಹರಾಜಿಗೆ ಒತ್ತಾಯ

ಲಕ್ಷ್ಮೇಶ್ವರ: ಪಟ್ಟಣದ ಬಸ್ ನಿಲ್ದಾಣ ಎದುರಿನ ಪುರಸಭೆಯ ವಾಣಿಜ್ಯ ಸಂಕೀರ್ಣದಲ್ಲಿನ ಮಳಿಗೆಗಳು ಮತ್ತು ಬಾನು ಮಾರ್ಕೆಟ್‌ಪ್ರದೇಶದ ಪುರಸಭೆಯ ವಾಣಿಜ್ಯ ಮಳಿಗೆಗಳ ಗುತ್ತಿಗೆ ಅವಧಿ ಮುಗಿದಿದ್ದು, ಕೂಡಲೇ ಅವುಗಳನ್ನು ವಶಕ್ಕೆ ಪಡೆಯುವಂತೆ ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗ ಮತ್ತು ಜಯ ಕರ್ನಾಟಕ ಸಂಘಟನೆಗಳು ಗುರುವಾರ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ (Demand) ಸಲ್ಲಿಸಿದವು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ ಮಾತನಾಡಿ, ಬಾನು ಮಾರ್ಕೆಟ್ ಮತ್ತು ಹೊಸ ಬಸ್ ನಿಲ್ದಾಣದ ಎದುರಿನ ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜು ಅವಧಿ 2023ಕ್ಕೆ ಮುಗಿದಿದೆ. ಆದರೂ ಪುರಸಭೆಯವರು ಮರು ಟೆಂಡರ್ ಕರೆಯದೆ ಮಳಿಗೆ ಪಡೆದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. 3 ವರ್ಷಗಳ ಅವಧಿಯ ಬಾಡಿಗೆ ಹಣ ಯಾವ ಖಾತೆಗೆ ಜಮೆಯಾಗುತ್ತಿದೆ ಎಂದು ಜನರಲ್ಲಿ ಸಂಶಯವುಂಟಾಗಿದೆ ಎಂದರು.
ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಇಸ್ಮಾಯಿಲ್ ಆಡೂರ ಮಾತನಾಡಿ, ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿ ತೂರಲಾಗಿದೆ. ಪುರಸಭೆಯ ವಾಣಿಜ್ಯ ಮಳಿಗೆಗಳನ್ನು ಪುರಸಭೆಯ ಸದಸ್ಯರೇ ಪಡೆದುಕೊಂಡಿದ್ದಾರೆ. ಅವುಗಳನ್ನು ಲಾಭದ ಉದ್ದೇಶಕ್ಕಾಗಿ ಬೇರೆಯವರಿಗೆ ಬಾಡಿಗೆ ಕೊಟ್ಟಿದ್ದಾರೆ ಎಂದು ದೂರಿದರು. ಮಳಿಗೆಗಳ ಸುಣ್ಣ- ಬಣ್ಣ ಕಾಣದೆ ಹಾಳಾಗಿವೆ. ಮೂಲಸೌಲಭ್ಯಗಳು ವಾಣಿಜ್ಯ ಮಳಿಗೆಗಳಲ್ಲಿಲ್ಲ. 15 ದಿನಗಳೊಳಗಾಗಿ ಅವಧಿ ಮುಗಿದ ಮಳಿಗೆಗಳನ್ನು ಪುರಸಭೆಯ ವಶಕ್ಕೆ ಪಡೆದುಕೊಂಡು ಅವುಗಳ ದುರಸ್ತಿ, ಸುಣ್ಣ ಬಣ್ಣಗಳನ್ನು ಮಾಡಿಸಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ಮೂಲಕ ಬಾಡಿಗೆ ಕೊಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಅವಧಿ ಮುಗಿದ ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು. 15 ದಿನಗಳೊಳಗಾಗಿ ವಶಕ್ಕೆ ಪಡೆದು ಕ್ರಮ ಕೈಕೊಳ್ಳಲಾಗುವುದು ಎಂದು ಭರವಸೆ ನೀಡಿದರು.