ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದ ಜಮೀನೊಂದರಲ್ಲಿ ಜಿಂಕೆಗಳ ಅವಶೇಷ ಪತ್ತೆಯಾಗಿರುವುದು. 
ಗದಗ

ಗ್ರಾಮೀಣ ಭಾಗದಲ್ಲಿ ಜಿಂಕೆ ಬೇಟೆ

ಹೊಲದಲ್ಲೇ ಪ್ರಾಣಿ ಅವಶೇಷ ಬಿಟ್ಟು ಪರಾರಿಯಾಗುವ ದುಷ್ಕರ್ಮಿಗಳು

ಲಕ್ಷ್ಮೇಶ್ವರ: ತಾಲೂಕಿನ ರಾಮಗೇರಿ, ಬಸಾಪುರ ಹಾಗೂ ಧರ್ಮಾಪುರ ಗ್ರಾಮಗಳ ಜಮೀನುಗಳಲ್ಲಿ ಕಳೆದ ಒಂದು ತಿಂಗಳಿಂದ ಜಿಂಕೆಗಳ ಅಕ್ರಮ ಬೇಟೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮಧ್ಯರಾತ್ರಿ ಬೈಕ್‌ಗಳಲ್ಲಿ ಬರುವ ದುಷ್ಕರ್ಮಿಗಳು ಜಿಂಕೆಗಳನ್ನು ಬೇಟೆಯಾಡಿ ಮಾಂಸ ಹಾಗೂ ಚರ್ಮವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಜಿಂಕೆಗಳ ಕಾಲು, ಕೂದಲು ಹಾಗೂ ಕರುಳು ಇತರ ಅವಶೇಷಗಳನ್ನು ಜಮೀನುಗಳಲ್ಲೇ ಬಿಟ್ಟು ಹೋಗುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ಆರೋಪ ಕೇವಲ ಜಿಂಕೆಗಳ ಬೇಟೆಯದ್ದಲ್ಲ, ಬದಲಾಗಿ ರೈತರ ಬೆಳೆಹಾನಿ ಮತ್ತು ಅವರ ಪ್ರಾಣಭಯದ್ದಾಗಿದೆ.

ಮೆಣಸಿನಕಾಯಿಗೆ ಬಂಗಾರದ ಬೆಲೆ ಇದೆ. ಹೀಗಾಗಿ ಬೆಳೆಗಳ ರಕ್ಷಣೆಗಾಗಿ ರಾತ್ರಿ ವೇಳೆ ಜಮೀನುಗಳಲ್ಲಿ ಕಾವಲು ಕಾಯುವ ರೈತರು ಈ ಬೇಟೆಗಾರರ ಚಟುವಟಿಕೆಗಳನ್ನು ಕಣ್ಣಾರೆ ನೋಡಿದ್ದಾರೆ. ಆದರೆ, ಗುಂಪಾಗಿ ಬರುವವರ ಕೈಯಲ್ಲಿ ಮಾರಕ ಆಯುಧಗಳಿರುವುದರಿಂದ ಅವರನ್ನು ಪ್ರಶ್ನಿಸಲು ಅಥವಾ ತಡೆಯಲು ರೈತರು ಭಯಪಡುತ್ತಿದ್ದಾರೆ. ಟಾರ್ಚ್ ಬೆಳಕು ಬೀರಿದಾಗ ಬೇಟೆಗಾರರು ರೈತರ ಮುಖಕ್ಕೆ ಬೆಳಕು ಹಿಡಿದು ಸ್ಥಳದಿಂದ ಪರಾರಿಯಾಗುತ್ತಿದ್ದಾರೆ. ಇದರಿಂದ ಜಮೀನುಗಳಲ್ಲಿ ರಾತ್ರಿ ಕಾವಲು ಕಾಯುವುದೂ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ರೈತರಾದ ಸಹದೇವಪ್ಪ ಹುಣಸಿಮರದ, ಬುಡ್ಡೇಸಾನ ತೆಗ್ಗಿನಮನಿ ಆತಂಕ ವ್ಯಕ್ತಪಡಿಸಿದ್ದಾರೆ.

ಅಪಾಯ

ಜಿಂಕೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆ ಹೊಂದಿರುವ ಪ್ರಾಣಿಗಳಾಗಿದ್ದು, ಅವುಗಳ ಬೇಟೆ ಕಾನೂನುಬಾಹಿರವಾಗಿದೆ. ಆಯುಧಧಾರಿ ಗುಂಪುಗಳ ಸಂಚಾರದಿಂದ ರೈತರು ಜಮೀನುಗಳಲ್ಲಿ ನಿರ್ಭೀತಿಯಿಂದ ಇರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ರಾತ್ರಿ ಗಸ್ತು ಹೆಚ್ಚಿಸಬೇಕು. ಅಕ್ರಮ ಬೇಟೆಯಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜಿಂಕೆಗಳ ಸಂರಕ್ಷಣೆಯ ಜತೆಗೆ ರೈತರಿಗೂ ಭದ್ರತೆ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪರಿಶೀಲಿಸಿ ಕ್ರಮ

ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಆರ್‌ಎಫ್‌ಒ ರೇಣುಕಮ್ಮ ಎ, ರಾಮಗೇರಿ, ಬಸಾಪುರ ಹಾಗೂ ಧರ್ಮಾಪುರ ಭಾಗಗಳಲ್ಲಿ ಜಿಂಕೆಗಳ ಬೇಟೆ ಕುರಿತು ಈವರೆಗೆ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ. ಇದೀಗ ರೈತರ ಆರೋಪದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸತ್ಯಾಸತ್ಯತೆ ಪರಿಶೀಲಿಸಲಾಗುವುದು. ಅಕ್ರಮವಾಗಿ ಜಿಂಕೆ ಬೇಟೆಯಾಡುತ್ತಿರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.