ನರಗುಂದ ತಾಲೂಕಿನ ಭೈರನಹಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ (tobacco)ತಂಬಾಕು ಮುಕ್ತ ಯುವ ಅಭಿಯಾನ 3.0 ಕಾರ್ಯಕ್ರಮದಲ್ಲಿ ಐ.ಆರ್. ಗಂಜಿ ಮಾತನಾಡಿದರು. ಎಂ.ಡಿ.ಸಕ್ರಿ, ಬಿ.ಆರ್.ಮುಳ್ಳೂರ, ವಿಜಯ ಸದಲಗಿ, ಲಕ್ಷ್ಮಣ ಮಾದರ, ಇತರರಿದ್ದರು. 
ಗದಗ

tobacco ತಂಬಾಕು ಸೇವನೆಯಿಂದ ಮಾರಣಾಂತಿಕ ಕಾಯಿಲೆ

ನರಗುಂದ: ತಂಬಾಕು (tobacco) ಸೇವನೆಯಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರಲಿದೆ. ಕೆಟ್ಟ ಹವ್ಯಾಸಗಳಿಗೆ ಯುವ ಪೀಳಿಗೆ ಒಳಗಾಗಬಾರದು. ಆರೋಗ್ಯಪೂರ್ಣ ಜೀವನಕ್ಕಾಗಿ ತಂಬಾಕು ತ್ಯಜಿಸಿ ತಂಬಾಕು ಮುಕ್ತ ಯುವ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್.ಗಂಜಿ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ತಾಲೂಕಿನ ಭೈರನಹಟ್ಟಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಂಬಾಕು ಮುಕ್ತ ಯುವ ಅಭಿಯಾನ 3.0 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹದಿಹರೆಯ ಪ್ರಾಯದಲ್ಲಿ ಮಕ್ಕಳಿಗೆ ದೈಹಿಕ, ಮಾನಸಿಕ, ಸಾಮಾಜಿಕ ಬದಲಾವಣೆಗಳಾಗುವುದರಿಂದ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಅತ್ಯಗತ್ಯವಿದೆ ಎಂದರು.
ಕರ್ನಾಟಕದಲ್ಲಿ ಹದಿನೈದು ವರ್ಷಕ್ಕಿಂತ ಮೇಲ್ಪಟ್ಟ ಶೇ.28 ರಷ್ಟು ಜನರು ಯಾವುದಾದರೊಂದು ರೀತಿಯ ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿದ್ದಾರೆ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಮಾರಣಾಂತಿಕ ಕಾಯಿಲೆಗೆ ತುತ್ತಾಗ ಬೇಕಾಗುತ್ತದೆ.
ತಂಬಾಕಿನಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ವಿಷಕಾರಿ ರಾಸಾಯನಿಕಗಳಿವೆ. ಹದಿ ಹರೆಯದವರು ಪ್ರತಿನಿತ್ಯ ಸಮತೋಲನ ಆಹಾರ ಸೇವನೆ, ಯೋಗ, ವ್ಯಾಯಾಮ, ವೈಯಕ್ತಿಕ ಮತ್ತು ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಂಡಾಗ ಸ್ವಾಸ್ಥ್ಯ, ಸುಂದರ ಜೀವನ ನಡೆಸಬಹುದು ಎಂದು ತಿಳಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಎಫ್. ಕುಂಬಾರ ಮಾತನಾಡಿ, ಯುವ ಜನಾಂಗದಲ್ಲಿ ತಂಬಾಕು, ಮದ್ಯ ಸೇವನೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ದುಶ್ಚಟಗಳ ಮುಕ್ತ ಸಮಾಜ ನಿರ್ಮಾಣಗೊಳ್ಳಬೇಕಾದರೆ ಇಂದಿನ ಯುವ ಜನಾಂಗದವರಿಗೆ ಗುರು-ಹಿರಿಯರು, ಪಾಲಕರು ಒಳ್ಳೆಯ ಮಾರ್ಗದರ್ಶನ ಮಾಡಬೇಕಾಗಿದೆ ಎಂದು ತಿಳಿಸಿದರು.
ಭೈರನಹಟ್ಟಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಎಂ.ಡಿ. ಸಕ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೌಢ ಶಾಲೆ ಶಿಕ್ಷಕ ಬಿ.ಆರ್. ಮುಳ್ಳೂರ, ವಿಜಯ ಸದಲಗಿ, ಲಕ್ಷ್ಮಣ ಮಾದರ, ಐ.ಎ. ಗುಳ್ಳನ್ನವರ ಇತರರಿದ್ದರು.