ಮುಂಡರಗಿ ಪಟ್ಟಣದಿಂದ ಯಕ್ಲಾಸಪೂರಕ್ಕೆ ತೆರಳುವ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಳ ಮಧ್ಯೆ ವಿದ್ಯುತ್ ಕಂಬ ಹಾಕಿರುವುದು. 
ಗದಗ

ಬೃಹತ್ ಮರಗಳಿಗೆ ಕಾದಿದೆ ಆಪತ್ತು!

ನೂರಾರು ಗಿಡಗಳ ಮಧ್ಯೆ ವಿದ್ಯುತ್ ಕಂಬ ಅಳವಡಿಕೆ

ಸಂತೋಷ ಮುರಡಿ ಮುಂಡರಗಿ

ಪಟ್ಟಣದ ಹೊರವಲಯದಿಂದ ಯಕ್ಲಾಸಪೂರ ರಸ್ತೆ ಬದಿಯಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಗಿಡಗಳ ಮಧ್ಯೆ ನೀರಾವರಿ ಇಲಾಖೆಯಿಂದ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು, ಅದರಿಂದ ಗಿಡ-ಮರಗಳು ನಾಶವಾಗುವ ಆತಂಕ ಪರಿಸರ ಪ್ರೇಮಿಗಳಲ್ಲಿ ಮೂಡಿದ್ದು, ಆಕ್ರೋಶಕ್ಕೂ ಕಾರಣವಾಗಿದೆ.

ಪಟ್ಟಣದ ಹೊರವಲಯದಿಂದ ಯಕ್ಲಾಸಪೂರ ರಸ್ತೆಯ ಎರಡು ಬದಿಯಲ್ಲಿ ಸುಮಾರು 8 ವರ್ಷಗಳ ಹಿಂದೆ ಸಾಮಾಜಿಕ ಅರಣ್ಯ ಇಲಾಖೆಯಿಂದ ಅರಳಿ, ಬೇವು ಸೇರಿದಂತೆ ವಿವಿಧ ಜಾತಿಯ ಸುಮಾರು 1,900 ಗಿಡಗಳನ್ನು ಬೆಳೆಸಲಾಗಿದೆ. ಅವು ಸಮೃದ್ಧಿಯಾಗಿ ಬೆಳೆದ ನಂತರ ನಿರ್ವಹಣೆಗಾಗಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ಪರಿಸರಕ್ಕೆ ಪೂರಕವಾಗಿರುವ ಆಮ್ಲಜನಕ ಉತ್ಪತ್ತಿ ಮಾಡುವ ಮತ್ತು ಗಾಳಿಯನ್ನು ಶುದ್ಧೀಕರಿಸುವ ಇಂತಹ ಗಿಡ-ಮರಗಳ ಮಧ್ಯದಲ್ಲಿ ನೀರಾವರಿ ಇಲಾಖೆಯಿಂದ ಹನಿ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಕಂಬ ಅಳವಡಿಕೆಗೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪರಿಣಾಮ ವಿದ್ಯುತ್‌ಲೈನ್ ಎಳೆಯುವ ಕಾರ್ಯ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಎರಡು ಬದಿ ಸಾಲಾಗಿ ಗಿಡಗಳು ಬೆಳೆದಿರುವುದರಿಂದ ಈ ಭಾಗದಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯಕ್ಕೆ ವಾಯುವಿಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಗಿಡಗಳ ಮಧ್ಯೆ ವಿದ್ಯುತ್ ಕಂಬಗಳು ಅಳವಡಿಸಿದ್ದಕ್ಕೆ ವಿವಿಧ ಸಂಘಟನೆಗಳು, ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿ ಕಂಬಗಳನ್ನು ತೆರುವುಗೊಳಿಸಿ ಗಿಡಗಳ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಸಂಬಂಧಿಸಿದ ಆಯಾ ಇಲಾಖೆಗಳಿಗೆ ಮನವಿ ಸಲ್ಲಿಸಿವೆ. ಹಾಗೆಯೇ ಅಹೋರಾತ್ರಿ ಧರಣಿ ಸಹ ಮಾಡಿದ್ದಾರೆ. ತೆರವುಗೊಳಿಸುವ ಭರವಸೆ ಮೇರೆಗೆ ತಾತ್ಕಲಿಕವಾಗಿ ಹೋರಾಟವನ್ನು ಕೈಬಿಡಲಾಗಿತ್ತು. ಆದರೆ, ಈವರೆಗೂ ಗಿಡಗಳ ಮಧ್ಯದಿಂದ ಕಂಬಗಳನ್ನು ತೆರುವುಗೊಳಿಸುವ ಕಾರ್ಯ ನಡೆದಿಲ್ಲ. ಹೀಗಾಗಿ ಪರಿಸರ ಪ್ರೇಮಿಗಳಲ್ಲಿ ಬೇಸರ ತರಿಸಿದ್ದು, ಬರುವ ದಿನಗಳಲ್ಲಿ ಕಾನೂನು ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಗಿಡಗಳನ್ನು ನಾಶವಾಗುವುದಕ್ಕೆ, ಹಾನಿಯಾಗುವುದಕ್ಕೆ ಬಿಡುವುದಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ಕಂಬಗಳನ್ನು ತೆರುವುಗೊಳಿಸಲು ತಿಳಿಸಲಾಗುತ್ತದೆ. ಆ ಭಾಗದಲ್ಲಿ ಗಿಡಗಳಿಗೆ ಯಾವುದೇ ರೀತಿ ಹಾನಿಯಾಗಂತೆ ನೋಡಿಕೊಳ್ಳಲು ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ಆರ್‌ಎಫ್‌ಒ ಮಲ್ಲಪ್ಪ ಕೆ. ತಿಳಿಸಿದ್ದಾರೆ.

ಬೆಳೆದು ನಿಂತಿರುವ ಗಿಡಗಳ ಮಧ್ಯದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸುವುದು ಎಷ್ಟರ ಮಟ್ಟಿಗೆ ಸರಿ? ವಿದ್ಯುತ್ ಕಂಬ ಹಾಕುವುದರಿಂದ ಗಿಡ-ಮರಗಳಿಗೆ ಹಾನಿಯೇ ಹೆಚ್ಚು. ಪರಿಸರ ನಾಶ ಮಾಡುವುದು ಸರಿಯಲ್ಲ. ಅನೇಕ ಸಂಘಟನೆಗಳು, ಪರಿಸರ ಪ್ರೇಮಿಗಳು ಸೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಹೋರಾಟ ಮಾಡಲಾಗಿದೆ. ಗಿಡಗಳ ಮಧ್ಯೆ ಅಳವಡಿಸಿರುವಂತಹ ಕಂಬಗಳನ್ನು ತೆರವುಗೊಳಿಸಬೇಕು.
ದೇವಪ್ಪ ಚಿಕ್ಕಣ್ಣವರ, ಸಾಮಾಜಿಕ ಕಾರ್ಯಕರ್ತ ಮುಂಡರಗಿ
ಮುಂಡರಗಿ ಪಟ್ಟಣದಿಂದ ಯಕ್ಲಾಸಪೂರ ರಸ್ತೆಯು ಜಿ.ಪಂ. ರಸ್ತೆಯಾಗಿದ್ದರಿಂದ ರಸ್ತೆ ಗಡಿ ಗುರುತಿಸಿಕೊಡುವಂತೆ ಜಿ.ಪಂ. ಅಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಸರ್ವೇ ಮಾಡಿ ರಸ್ತೆ ಗಡಿ ತಿಳಿಸಿದರೆ ಗಿಡಗಳನ್ನು ಬಿಟ್ಟು ಕಂಬಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಕಾಮಗಾರಿ ಮಾಡುವುದಿಲ್ಲ. ಗಿಡಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲಾಗುತತ್ದೆ.
ನಟರಾಜ ಬಿ.ಎಸ್, ಎಇಇ, ಪುನರ್‌ವಸತಿ ಪುನರ್‌ನಿರ್ಮಾಣ ವಿಭಾಗ ಸಿ.ಎ. ನೀರಾವರಿ ಯೋಜನೆ ಮುಂಡರಗಿ