ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದಲ್ಲಿ ಗಾಳಿ ಮಳೆಗೆ ನೆಲಕಚ್ಚಿದ ಬಾಳೆ ಗಿಡ
ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ಹಲವೆಡೆ ಗುರುವಾರ ಭಾರಿ ಗಾಳಿ ಮತ್ತು ಸಾಧಾರಣ ಮಳೆಗೆ ಕೆಲವೆಡೆ ಬಾಳೆ, ಇನ್ನಿತರ ಬೆಳೆ ಹಾನಿಯಾಗಿದ್ದರೆ, ಮತ್ತೊಂದೆಡೆ ಗಿಡಗಳು ಬಿದ್ದು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ತಾಲೂಕಿನ ಜಾಲವಾಡಗಿ ಗ್ರಾಮದ ಶಾರದಮ್ಮ ಪಾಟೀಲ ಅವರ 2.10ಎಕರೆ ಜಮೀನಿನಲ್ಲಿ ಅವರ ಮಗ ರೈತ ಆನಂದಗೌಡ ಅವರು ಸಸಿ ನೆಟ್ಟು ಒಂದು ವರ್ಷದಿಂದ ಪಾಲನೆ, ಪೋಷಣೆ ಮಾಡಿ ಬೆಳೆದಿದ್ದ ಬಾಳೆ ಬೆಳೆ ನೆಲಕಚ್ಚಿವೆ. ಕಟಾವಿಗೆ ಬಂದಿದ್ದ ಬಾಳೆ ಬೆಳೆ ಬಿರುಸಾದ ಗಾಳಿಗೆ ಬಾಳೆಗೊನೆಗಳೊಂದಿಗೆ ಗಿಡಗಳು ನೆಲಕ್ಕೆ ಬಾಗಿವೆ.
26ರೂ.ಗೆ ಒಂದರಂತೆ ಜೈನ್ ತಳಿಯ 2,500ಏಲಕ್ಕಿ ಬಾಳೆ ಸಸಿ ತಂದು ನೆಟ್ಟು ಬೆಳೆಸಿದ್ದರು. ಸಸಿ, ಗೊಬ್ಬರ, ಔಷಧಿ, ನಿರ್ವಹಣೆ ಸೇರಿ ಸುಮಾರು 2.50ಲಕ್ಷ ರೂ.ವರೆಗೂ ಖರ್ಚು ಮಾಡಿದ್ದರು. ಯುಗಾದಿ ನಂತರ ಬಾಳೆ ಕಟಾವು ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಕಟಾವು ಮಾಡುವ ಮುಂಚೆ ತೋಟಕ್ಕೆ ಬಂದಿದ್ದ ಬಾಳೆ ವ್ಯಾಪಾರಸ್ಥರು ಕೆಜಿ ಬಾಳೆಗೆ 45ರೂ.ಯಂತೆ ಕೇಳಿದ್ದರು. ಆದರೆ, ಈಗ 20ರೂ.ಗೂ ಕೇಳದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುರುಡಿ, ಶಿರೋಳ, ಮತ್ತಿತರ ಕಡೆಗಳಲ್ಲೂ ಬಾಳೆ, ಹೈಬ್ರಿಡ್ ತರಕಾರಿ ಬೆಳೆ ಹಾನಿಯಾಗಿದೆ. ತೋಟಗಾರಿಕೆ ಅಧಿಕಾರಿ ಚಿದಾನಂದ ಕಳಸಾಪೂರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2,500ಬಾಳೆ ಗಿಡಗಳಲ್ಲಿ ಶೇ.85ರಷ್ಟು ಬಾಳೆಗಿಡ ಹಾನಿಯಾಗಿದೆ. ಪ್ರತಿಯೊಂದು ಬಾಳೆಗೊನೆ 12ಕೆಜಿಗಿಂತ ಹೆಚ್ಚಿನ ತೂಕ ಬರುತ್ತಿತ್ತು. 45ರೂ.ಕೆಜಿ ಕೇಳಿದ್ದವರು, 20ರೂ.ಕೇಳುತ್ತಿಲ್ಲ. ಸುಮಾರು 8ರಿಂದ 10ಲಕ್ಷ ರೂ.ವರೆಗೂ ನಷ್ಟವಾಗಿದೆ. ಹಾನಿಯಾದ ರೈತರ ಬೆಳೆಗೆ ಸರ್ಕಾರ, ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಿ ನೆರವು ನೀಡಬೇಕು ಎನ್ನುತ್ತಾರೆ ರೈತ ಆನಂದಗೌಡ ಪಾಟೀಲ.
ಇನ್ನೂ ಪಟ್ಟಣದ ಜ.ಅ. ತಾಲೂಕು ಕ್ರೀಡಾಂಗಣ ಭಾಗ, ರಾಮೇನಹಳ್ಳಿ ರಸ್ತೆ, ಡಿಪೋ ರಸ್ತೆ ಭಾಗದಲ್ಲಿ ಗಿಡಗಳು ಬಿದ್ದು, ವಿದ್ಯುತ್ ಕಂಬಗಳು ಸಹ ನೆಲಕ್ಕೆ ಬಾಗಿವೆ. ಗುರುವಾರ ಕೆಲ ಸಮಯ ವಿದ್ಯುತ್ ವ್ಯತ್ಯು ಉಂಟಾಯಿತು. ಹೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯ ಮಾಡಿದರು.