CROP LOSS ನರಗುಂದದಲ್ಲಿ ಭಾರತೀಯ ಕಿಸಾನ್ ಸಂಘದಿಂದ ತಹಸೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ನರಗುಂದ: ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ, ಬೆಳೆ ಪರಿಹಾರ ಮತ್ತು ನೀರಾವರಿ ಸಮಸ್ಯೆ ಬಗೆಹರಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ ಶೇ. 75ರಷ್ಟು ರೈತರು ಸಮೃದ್ಧವಾದ ಕಡಲೆ ಬೆಳೆ ಬೆಳೆದಿದ್ದಾರೆ. 15ರಿಂದ 20 ದಿನಗಳಲ್ಲಿ ಬೆಳೆಗಳನ್ನು ಸಂಪೂರ್ಣ ಕಟಾವು ಮಾಡುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಂಬಲ ಬೆಲೆ ಕಡಲೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಪ್ರತಿ ರೈತರಿಂದ 30 ಕ್ವಿಂಟಾಲ್ ಕಡಲೆ ಕಾಳುಗಳನ್ನು ಗರಿಷ್ಠ ಬೆಂಬಲ ಬೆಲೆಯಡಿ ಖರೀದಿಸಬೇಕು ಎಂದರು.
ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ತಾಲೂಕಿನ ಬಹುತೇಕ ರೈತರ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಆದರೆ, ಇದುವರೆಗೆ ಸರ್ಕಾರದಿಂದ ಪರಿಹಾರ ಬಂದಿಲ್ಲ. ಒಂದು ವಾರದಲ್ಲಿ ಸರ್ಕಾರದಿಂದ ಪರಿಹಾರ ವಿತರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಾಗೇಶ ಅಪ್ರೋಜಿ, ವಿಠ್ಠಲ ಮುಧೋಳೆ, ಎಂ.ಬಿ. ಯಲಿಗಾರ, ಹನುಮಂತ ಹದಗಲ್ಲ, ಶ್ರೀಶೈಲ ಮೇಟಿ, ಹುಸೇನಸಾಬ್ ಮುಳಗುಂದ, ಎ.ಐ. ಮೆಣಸಿನಕಾಯಿ, ಎಚ್.ವಿ. ಪಾಟೀಲ, ಈರಪ್ಪ ಗುದಗಿ, ಬಸವಂತಪ್ಪ ಘಾಟಗೆ, ನಾಗಪ್ಪ ಬಸಾಪೂರ, ಎಂ.ಎಸ್. ಹಂಚಿನಾಳ, ಶಿದ್ಧನಗೌಡ ವೀರನಗೌಡ್ರ, ಯೋಗೇಶ ಗುಡಾರದ, ಶರಣಬಸಪ್ಪ ಪಾರ್ವತಿಯವರ, ಇತರರಿದ್ದರು.