ನರಗುಂದ ಕೃಷಿ ಇಲಾಖೆ ಕಚೇರಿಯಲ್ಲಿ ರೈತರು ಹೊಸ ಎಫ್‌ಐಡಿ ಮಾಡಿಸಲು ಸಾಲಾಗಿ ನಿಂತಿರುವುದು.
ಸರ್ಕಾರದ ಪರಿಹಾರ ಹಂಚಿಕೆ ವಿಚಾರವಾಗಿಯೂ ಎಫ್‌ಐಡಿ ಜಂಟಿ ಖಾತೆ ಹೊಂದಿರುವ ಸಹೋದರರ ದಾಯಾದಿ ಕಲಹಕ್ಕೆ ಕಾರಣವಾಗಿತ್ತು. ಆದರೀಗ ಈ ಸಮಸ್ಯೆಗೆ ಶಾಶ್ವತ ಮುಕ್ತಿ ಕಂಡುಕೊಳ್ಳುವ ಸಲುವಾಗಿ ಸರ್ಕಾರ ಜಂಟಿ ಖಾತೆಗಳನ್ನು ಸಮಷೇರುಗಳನ್ನಾಗಿ ಪರಿವರ್ತನೆಗೊಳಿಸಿದ್ದು, ಇದರಿಂದ ಕೃಷಿ ಇಲಾಖೆಯ ವಿವಿಧ ಯೋಜನೆಗಳು ಮಧ್ಯವರ್ತಿಗಳು ಹಾಗೂ ಸ್ವತಃ ಕುಟುಂಬಸ್ಥರಿಂದಲೇ ನಡೆಯುತ್ತಿದ್ದ ಮೋಸ, ವಂಚನೆ, ಗೋಲ್ಮಾಲ್‌ಗಳಿಗೆ ಬ್ರೇಕ್ ಬೀಳಲಿದೆ.
ಜಂಟಿ ಖಾತೆಗಳನ್ನು ಹೊಂದಿದ ರೈತರು ಈಗಾಗಲೇ ಎಫ್‌ಐಡಿ ಮಾಡಿಸಿಕೊಂಡಿದ್ದರೂ ಪ್ರಸಕ್ತ ಸಾಲಿನ ಬೆಳೆವಿಮೆ ಅರ್ಜಿ ಸಲ್ಲಿಕೆಗೆ ಮತ್ತೆ ಎಫ್‌ಐಡಿ ಮಾಡಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಜಂಟಿ ಖಾತೆದಾರರು ಹೊಸ ಎಫ್‌ಐಡಿ ಮತ್ತು ಬೆಳೆವಿಮೆ ಪಾವತಿಗೆ ಮುಗಿ ಬೀಳುವಂತಾಗಿದೆ. ಸರ್ಕಾರದ ವಿನೂತನ ಕ್ರಮ ರೈತರನ್ನು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.
ಪ್ರತಿಯೊಬ್ಬರಿಗೂ ಪರಿಹಾರ: ಈ ಹಿಂದೆ 5 ಎಕರೆ ಜಮೀನು ಹೊಂದಿರುವ ಐವರು ಫಲಾನುಭವಿಗಳ ಪೈಕಿ ಉತಾರದಲ್ಲಿದ್ದ ಯಾರಾದರೂ ಒಬ್ಬ ಸದಸ್ಯ ಎಫ್‌ಐಡಿ ಸಂಖ್ಯೆ ಮಾಡಿಸಿಕೊಂಡು ಸಂಪೂರ್ಣ 5 ಎಕರೆಯ ಬೆಳೆವಿಮೆ, ಬರ ಪರಿಹಾರ, ಫಸಲ್ ವಿಮಾ ಸೇರಿ ವಿವಿಧ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಇತ್ತು. ಆದರೀಗ ಸರ್ಕಾರದ ವಿನೂತನ ಕ್ರಮದಿಂದ ಇದಕ್ಕೆಲ್ಲ ಬ್ರೇಕ್ ಹಾಕಿದಂತಾಗಿದೆ. ಆರ್‌ಟಿಸಿ ಉತಾರದಲ್ಲಿ 5 ಜನ ಜಂಟಿ ಖಾತೆ ಹೊಂದಿದ್ದರೆ ಪ್ರತಿಯೊಬ್ಬರು ಸರ್ಕಾರದ ಪರಿಹಾರ ಮತ್ತು ವಿವಿಧ ಕೃಷಿಪೂರಕ ಯೋಜನೆಗಳಿಗೆ ಅರ್ಹರಾಗಿರುತ್ತಾನೆ. ಹೀಗಾಗಿ ಪ್ರಸಕ್ತ ವರ್ಷದಿಂದ 5 ಎಕರೆ ಜಮೀನಿನ ಜಂಟಿ ಖಾತೆ ಹೊಂದಿದ್ದರೆ ಅಂತವರು ತಲಾ 1 ಎಕರೆ ಜಮೀನಿನ ಬೆಳೆವಿಮೆ ಪಾವತಿಸಬೇಕು. 5 ಜನರಲ್ಲಿ ಎಫ್‌ಐಡಿ ಹೊಂದದೆ ಯಾರು ಬೆಳೆವಿಮೆ ಪಾವತಿಸುವುದಿಲ್ಲವೋ ಅಂತವರಿಗೆ ಬೆಳೆಹಾನಿ ಪರಿಹಾರ ಸಿಗುವುದಿಲ್ಲ. ಆಕಸ್ಮಾತ್ ನಾಲ್ವರು ಬೆಳೆವಿಮೆ ಪಾವತಿಸಿದ್ದರೆ ಬೆಳೆ ಸಮೀಕ್ಷೆಯ ನಿಖರ ಮಾಹಿತಿ ಆಧರಿಸಿ ಸರ್ಕಾರದಿಂದ ಸೂಕ್ತ ಪರಿಹಾರ ನೇರವಾಗಿ ರೈತರ ಖಾತೆಗೆ ಲಭಿಸಲಿದೆ. ಸಹೋದರರ ವೈಯಕ್ತಿಕ ಕಲಹ, ವೈಷಮ್ಯಗಳ ನಡುವೆಯೂ ಸಂಪೂರ್ಣ ಜಮೀನಿನ ಬೆಳೆವಿಮೆ ಪಾವತಿಗೆ ಮುಂದಾದರೂ ವೆಬ್‌ಸೈಟ್‌ನಲ್ಲಿ ಸ್ವೀಕೃತಿ ಆಗುವುದಿಲ್ಲ. ಸಹೋದರರು ಒಟ್ಟಿಗೆ ಇದ್ದಲ್ಲಿ ಅಂತವರು ಕೂಡ ಪ್ರತ್ಯೇಕ ಎಫ್‌ಐಡಿ ಸಂಖ್ಯೆ ಹೊಂದಿರುವುದರ ಜತೆಗೆ ಎಲ್ಲ ಎಫ್‌ಐಡಿ ಸಂಖ್ಯೆಗಳನ್ನು ನೀಡಿ ಬೆಳೆವಿಮೆ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿರುವುದರಿಂದ ರೈತರೀಗ ಹೊಸ ಎಫ್‌ಐಡಿಗೆ ಮುಗಿಬೀಳುವಂತಾಗಿ ಕೆಲವೆಡೆ ಸರ್ವರ್ ಸಮಸ್ಯೆಗೆ ಕಾರಣವಾಗಿದೆ.
ಏಕೆ ಬೇಕು ಎಫ್‌ಐಡಿ?: ಎಫ್‌ಐಡಿ ಇದು ಕೃಷಿಕರ ಮಾಹಿತಿಗಳನ್ನು ಒಂದೇ ಸೂರಿನಡಿ ಹಿಡಿದಿಟ್ಟುಕೊಳ್ಳುವ ಪೋರ್ಟಲ್ ಆಗಿರುವುದರಿಂದ ರೈತರು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು. ಈ ಮಹತ್ವದ ಪೋರ್ಟ್‌ಲ್‌ನಲ್ಲಿ ಕೃಷಿಕರು ತಮ್ಮ ಹೆಸರು ನೋಂದಾಯಿಸಿಕೊಳ್ಳದಿದ್ದರೆ ಅವರಿಗೆ ಬೆಳೆಸಾಲ, ಬರ ಪರಿಹಾರ, ಬೆಳೆವಿಮೆ, ಕೃಷಿಕರ ಮಕ್ಕಳಿಗೆ ದೊರೆಯುವ ವಿದ್ಯಾನಿಧಿ, ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನಗಳ ಮಾರಾಟ ಹಾಗೂ ಕೃಷಿ ಪೂರಕವಾದ ಇನ್ನಿತರೆ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಹೀಗಾಗಿ ಸರ್ಕಾರದ ಆದೇಶದನ್ವಯ ರೈತರಿಗೆ ಇದು ಕಡ್ಡಾಯ.
"
ಜಂಟಿ ಖಾತೆ ಹೊಂದಿರುವ ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಹಿಸ್ಸಾ ಅನುಗುಣವಾಗಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆ ನೀಡಿ ಹೊಸ ಎಫ್‌ಐಡಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಸಮಷೇರುಗಳ ಪರಿವರ್ತನೆಯಿಂದ ಕೃಷಿ ಇಲಾಖೆಯ ವಿವಿಧ ಯೋಜನೆಗಳು ಮಧ್ಯವರ್ತಿಗಳು ಹಾಗೂ ಸ್ವತಃ ಕುಟುಂಬಸ್ಥರಿಂದಲೇ ನಡೆಯುತ್ತಿದ್ದ ಮೋಸ, ವಂಚನೆ, ಗೋಲ್ಮಾಲ್‌ಗಳನ್ನು ತಡೆಯಬಹುದು.
— ಎಫ್.ಎಸ್. ಬೆಳವಟಗಿ. ಸಹಾಯಕ ಕೃಷಿ ನಿರ್ದೇಶಕ ನರಗುಂದ