ನರಗುಂದದ ಇಂಡಿಯನ್ ಗ್ಯಾಸ್ (oil) ಏಜೆಸ್ಸಿ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದ ಗ್ರಾಹಕರು ಬುಕಿಂಗ್‌ಗಾಗಿ ಕಾದು ನಿಂತಿರುವುದು. 
ಗದಗ

oil: ಅಡುಗೆ, ಉದ್ಯಮಕ್ಕೂ ತಟ್ಟಿದ ತೈಲ ಬಿಸಿ

ಪ್ರಮುಖ ಮುಖ್ಯಾಂಶಗಳು

  • ಇರಾನ್-ಇಸ್ರೇಲ್, ಅಮೆರಿಕಾ ನಡುವಿನ ಯುದ್ಧ
  • ಗೃಹ ಬಳಕೆಯ ಸಿಲಿಂಡರ್ ಪಡೆಯಲು ಗ್ರಾಹರು ಹರಸಾಹಸ
  • ಏಕಾಏಕಿ ಬುಕಿಂಗ್ ಸಂಖ್ಯೆ ಹೆಚ್ಚಳ
ರಾಜು ಹೊಸಮನಿ ನರಗುಂದ
ಇರಾನ್-ಇಸ್ರೇಲ್, ಅಮೆರಿಕಾ ನಡುವಿನ ಯುದ್ಧದಿಂದಾಗಿ ಜಾಗತಿಕವಾಗಿ (oil) ಇಂಧನ ಬಿಕ್ಕಟ್ಟು ತಲೆದೋರಿದ್ದು ಅದರ ಪರಿಣಾಮ ತಾಲೂಕಿನ ಜನತೆಗೂ ತಟ್ಟಿದೆ. ಗೃಹ ಬಳಕೆಯ ಸಿಲಿಂಡರ್ ಪಡೆಯಲು ಗ್ರಾಹರು ಹರಸಾಹಸ ಪಡುವಂತಾಗಿದೆ.
ಅಡುಗೆ ಅನಿಲ ಸಿಲಿಂಡರ್‌ನ ಅಕ್ರಮ ದಾಸ್ತಾನು ತಡೆಯುವುದು ಹಾಗೂ ಎಲ್‌ಪಿಜಿ ಸಿಲಿಂಡರ್ ಲಭ್ಯತೆ ನ್ಯಾಯಸಮ್ಮತವಾಗಿ ಪೊರೈಕೆಯಾಗುವಂತೆ ನೋಡಿಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರ ಎಲ್‌ಪಿಜಿ ಗೃಹ ಬಳಕೆ ಸಿಲಿಂಡರ್ ವಿತರಣೆ ನಿಯಮಗಳಲ್ಲಿ ಬದಲಾವಣೆ ತಂದಿದೆ. ಒಬ್ಬ ಗ್ರಾಹಕರು ಒಂದು ಬಾರಿ ಎಲ್‌ಪಿಜಿ ಸಿಲಿಂಡರ್ ಖರೀದಿಸಿದ ನಂತರ ಮತ್ತೊಂದು ಸಿಲಿಂಡರ್ ಖರೀದಿ ಮಾಡಲು 25 ದಿನ ಕಾಯಬೇಕೆಂಬ ನೂತನ ನಿಯಮ ಜಾರಿಗೊಳಿಸಿದೆ. ಈ ಮೊದಲು ಒಂದು ಸಿಲಿಂಡರ್ ಖರೀದಿಸಿದ 21 ದಿನಗಳ ನಂತರ ಗ್ರಾಹಕರಿಗೆ ಮತ್ತೊಂದು ಎಲ್‌ಪಿಜಿ ಸಿಲಿಂಡರ್ ಪಡೆಯಲು ಅವಕಾಶವಿತ್ತು. ಆದರೀಗ ಇರಾನ್-ಇಸ್ರೇಲ್ ಯುದ್ಧದ ನಡುವೆ ಕೇಂದ್ರ ಸರ್ಕಾರವು ಆಯಿಲ್ ಮಾರ್ಕೆಟಿಂಗ್ ಕಂಪನಿಸ್ (ಒಎಂಸಿ) ವತಿಯಿಂದ ಗ್ರಾಹಕರು ಕಡ್ಡಾಯ ಒಟಿಪಿ ಮಾಡಬೆಕೆಂಬ ನಿಯಮ ಜಾರಿಗೊಳಿಸಿದೆ. ಇದರಿಂದ ಗ್ರಾಹಕರ ಎಲ್‌ಪಿಜಿ ಸಿಲಿಂಡರ್ ದಾಸ್ತಾನು ಮತ್ತು ಪೊರೈಕೆಗೆ ಸಮಸ್ಯೆ ಉಂಟಾಗಿದೆ. ನರಗುಂದ ತಾಲೂಕಿನ ಎಲ್ಲ ಹೋಟೆಲ್, ಡಾಬಾ, ರೆಸ್ಟೋರೆಂಟ್ ಮುಂತಾದವುಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್ ಪೊರೈಕೆ ಸ್ಥಗಿತಗೊಳಿಸಿದ್ದರಿಂದ ವ್ಯಾಪಾರ ವಹಿವಾಟಿಗೆ ಹಿನ್ನೆಡೆ ಉಂಟಾಗಿದೆ. 
ನರಗುಂದದ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ 25 ಸಾವಿರ ಗೃಹ ಬಳಕೆದಾರರು, 190 ವಾಣಿಜ್ಯ ಬಳಕೆದಾರರಿಗೆ ಸಿಲಿಂಡರ್ ಗ್ಯಾಸ್ ಪೊರೈಕೆ ಮಾಡಲಾಗುತ್ತಿತ್ತು. ತಾಲೂಕಿನ ಕೊಣ್ಣೂರಿನ ಭಾರತ ಗ್ಯಾಸ್ ಏಜೆಸ್ಸಿಯಿಂದ 12,000 ಗೃಹ ಬಳಕೆದಾರರು, 110 ವಾಣಿಜ್ಯ ಬಳಕೆದಾರರು ಸೇರಿ ಒಟ್ಟು 37 ಸಾವಿರ ಗೃಹ ಬಳಕೆದಾರು, 300 ವಾಣಿಜ್ಯ ಬಳಕೆದಾರರಿಗೆ ಸಿಲಿಂಡರ್ ಪೊರೈಕೆ ಮಾಡಲಾಗುತ್ತಿತ್ತು. ಈಗ ಜಾಗತಿಕ ಇಂಧನ ಬಿಕ್ಕಟ್ಟಿನ ಭೀತಿಯಿಂದಾಗಿ ಗ್ರಾಹಕರು ಏಕಾಏಕಿ ಎಲ್‌ಪಿಜಿ ಗ್ಯಾಸ್ ಪಡೆಯಲು ಮುಂದಾಗಿರುವುದರಿಂದ ಸರ್ವರ್ ಸಮಸ್ಯೆ ಉಂಟಾಗಿ ದಿನವಿಡೀ ಅಂಗಡಿಗಳ ಬಾಗಿಲು ಕಾಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಲವರು ಗ್ಯಾಸ್ ಪೊರೈಸದ ಅಂಗಡಿ ಮಾಲೀಕರೊಂದಿಗೆ ವಾಗ್ದಾದ ನಡೆಸುತ್ತಿರುವುದು ಕಂಡು ಬರುತ್ತಿದೆ.
ಸೌದೆಗೆ ಬಂತು ಆಭರಿ ಡಿಮಾಂಡ್
ಕೊಲ್ಲಿ ಯುದ್ಧದ ಪರಿಣಾಮ ಅನಿಲ ಪೊರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರ ಪರಿಣಾಮ ನರಗುಂದ ತಾಲೂಕಿನ ವಾಣಿಜ್ಯ ಬಳಕೆದಾರರಿಗೆ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಸೌದೆ (ಕಟ್ಟಿಗೆಗೆ) ಭಾರಿ ಬೇಡಿಕೆ ಬಂದಿದೆ. ಕೆಲ ಗೃಹ ಬಳಕೆದಾರರು, ಹೋಟೆಲ್ ಉದ್ದಿಮೆದಾರರು ಗ್ಯಾಸ್ ಬದಲಾಗಿ ಕಟ್ಟಿಗೆಯ ಒಲೆ ಉರಿಸಲು ಮುಂದಾಗಿದ್ದಾರೆ. ಹೀಗಾಗಿ ವಿವಿಧ ಅಡ್ಡೆಗಳಲ್ಲಿದ್ದ ಕಟ್ಟಿಗೆ ಸಂಪೂರ್ಣ ಮಾರಾಟಗೊಂಡಿವೆ. ಪ್ರತಿ ಕ್ವಿಂಟಾಲ್‌ಗೆ 650 ರಿಂದ 700 ರೂ.ವರೆಗೆ ಮಾರಾಟವಾಗುತ್ತಿದ್ದ ಕಟ್ಟಿಗೆ 1 ಸಾವಿರ ರೂ.ಗಳ ವರೆಗೆ ಮಾರಾಟ ಮಾಡಲಾಗುತ್ತಿದೆ.
"

ನರಗುಂದದಲ್ಲಿ ಪ್ರತಿದಿನ 100 ರಿಂದ 200 ಜನರು ಗ್ಯಾಸ್ ಬುಕಿಂಗ್ ಮಾಡಿಕೊಳ್ಳುತ್ತಿದ್ದರು. ಆದರೀಗ ಸಂಪೂರ್ಣ ಗ್ಯಾಸ್ ಪೂರೈಕೆ ಸ್ಥಗಿತಗೊಳ್ಳಲಿದೆ ಎನ್ನುವ ಆತಂಕದಿಂದ 200 ರಿಂದ 500 ಜನ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸರ್ವರ್ ಸಮಸ್ಯೆ ಎದುರಾಗಿದೆ. ವಾಣಿಜ್ಯ ಬಳಕೆದಾರರಿಗೆ ಗ್ಯಾಸ್ ನೀಡುತ್ತಿಲ್ಲ. ಆದರೆ, ಯಾವುದೇ ಶಾಲೆ, ಕಾಲೇಜ್, ವಸತಿ ನಿಲಯಗಳ ಗ್ಯಾಸ್ ಪೊರೈಕೆ ನಿಲ್ಲಿಸಿಲ್ಲ.

ನಮಗೆ ವಾಣಿಜ್ಯ ಬಳಕೆ ಸಿಲಿಂಡರ್ ವಿತರಣೆ ಮಾಡುತ್ತಿಲ್ಲ. ಮಸಾಲೆ ದೋಸೆಗೆ ಹೆಚ್ಚಿನ ಇಂಧನದ ಅವಶ್ಯಕತೆಯಿದೆ. ಶೇ. 70ರಷ್ಟು ಅನಿಲ ದೋಸೆ ತಯಾರಿಸುವ ತವಾಗಳಿಗೆ ಖರ್ಚಾಗುತ್ತದೆ. ಗ್ಯಾಸ್ ಪೊರೈಕೆ ಸ್ಥಗಿತವಾಗಿರುವ ಸುದ್ದಿ ಕೇಳಿದಾಕ್ಷಣ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಿಗೆ ಖರೀದಿಸಲು ಮುಂದಾಗಿದ್ದೇವೆ.