WATER TANK ಲಕ್ಷ್ಮೇಶ್ವರ ಪುರಸಭೆ ಕಲಾ ಮಹಾವಿದ್ಯಾಲಯದ ಪ್ರಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಲಾಗಾರ ಕಾಮಗಾರಿ 
ಗದಗ

WATER TANK ಕಾಲೇಜ್ ಕ್ಯಾಂಪಸ್‌ನಲ್ಲಿ ಜಲಾಗಾರ ನಿರ್ಮಾಣಕ್ಕೆಆಕ್ಷೇಪ

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಕಲಾ ಮಹಾವಿದ್ಯಾಲಯ ಕ್ಯಾಂಪಸ್‌ನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಿರ್ಮಾಣ ಮಾಡುತ್ತಿರುವ ಬೃಹತ್ ಜಲಾಗಾರ (WATER TANK) ಕಾಮಗಾರಿ ಸ್ಥಗಿತಗೊಳಿಸಿ, ಬೇರೆ ಕಡೆ ನಿರ್ಮಾಣ ಮಾಡಬೇಕು  ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ ಮತ್ತು ದಲಿತ ಯುವ ಮುನ್ನಡೆ ಸಂಘಟನೆಯ ಅಧ್ಯಕ್ಷ ಡಿ.ಬಿ ಫಕೀರಪ್ಪ ಆಗ್ರಹಿಸಿದ್ದಾರೆ. 
ಶರಣು ಗೋಡಿ ಮಾತನಾಡಿ, ಪುರಸಭೆ ಕಲಾ ಮಹಾವಿದ್ಯಾಲಯಕ್ಕೆ ನೂರಾರು ವರ್ಷಗಳ ಶ್ರೇಷ್ಠ ಇತಿಹಾಸವಿದೆ. ಕೆಲವೇ ದಿನಗಳಲ್ಲಿ ಈ ಪದವಿ ಕಾಲೇಜು ಸರ್ಕಾರಕ್ಕೆ ಹಸ್ತಾಂತರಗೊಳ್ಳಲಿದೆ. ಇಲ್ಲಿರುವುದು ಕೇವಲ 2 ಎಕರೆ 17 ಗುಂಟೆ ಜಾಗ ಮಾತ್ರ. ಇದರಲ್ಲಿ ಕಾಲೇಜು ಕಟ್ಟಡ, ಲೈಬ್ರರಿ, ಕಾರ್ಯಾಲಯ ನಿರ್ಮಾಣಗೊಂಡಿವೆ. ಉಳಿದ ಅಲ್ಪಸ್ವಲ್ಪ ಖಾಲಿ ಜಾಗದಲ್ಲಿ ಟ್ಯಾಂಕ್ ನಿರ್ಮಾಣಗೊಂಡರೆ ಭವಿಷ್ಯದಲ್ಲಿ ಶಿಕ್ಷಣ, ಕ್ರೀಡೆ ಇತರ ಪಠ್ಯೇತರ ಚಟುವಟಿಕೆಗೆ ಜಾಗ ಇಲ್ಲದಂತಾಗುತ್ತದೆ. ಇದೇ ಕ್ಯಾಂಪಸ್‌ನಲ್ಲಿ ಕೇಂದ್ರ ಹವಾಮಾನ ಇಲಾಖೆ, ಮ್ಯಾಪಿಂಗ್ ಸೆಂಟರ್ ಆರಂಭಿಸಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಈ ಭೂಮಿಯನ್ನು ದಾನ ಮಾಡಿದ್ದಾರೆ. ಈ ಜಾಗದಲ್ಲಿ ಜಲಾಗಾರ ನಿರ್ಮಾಣವಾದಲ್ಲಿ ಭವಿಷ್ಯದಲ್ಲಿ ಕಾಲೇಜಿನ ಅಭಿವೃದ್ಧಿಗೆ ಸಾಕಷ್ಟು ಅಡ್ಡಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ಕಾಮಗಾರಿಗೆ ನಮ್ಮ ತಕರಾರಿಲ್ಲ. ಆದರೆ. ಜಲಾಗಾರ ನಿರ್ಮಾಣಕ್ಕೆ ಪಟ್ಟಣದಲ್ಲಿ ಸಾಕಷ್ಟು ಸ್ಥಳಾವಕಾಶ (ಸಿಎ ನಿವೇಶನ)ಗಳಿವೆ. ಅಂಥ ಜಾಗದಲ್ಲಿ ನಿರ್ಮಾಣ ಮಾಡಬೇಕು. ಈಗಾಗಲೇ ಪಟ್ಟಣಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಹತ್ತಾರು ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ನಾಲ್ಕೈದು ಜಲಾಗಾರಗಳು ನಿರುಪಯುಕ್ತವಾಗಿವೆ. ಅವುಗಳನ್ನೂ ಬಳಸಬಹುದು. ಸಾಕಷ್ಟು ವಿರೋಧವಿದ್ದರೂ ಗುತ್ತಿಗೆದಾರರು ತಮ್ಮ ರಾಜಕೀಯ ಪ್ರಭಾವ ಮತ್ತು ರಾಜಕಾರಣಿಗಳ ಕುಮ್ಮಕ್ಕಿನಿಂದ ಜಿದ್ದಿಗೆ ಬಿದ್ದಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ದಲಿತ ಯುವ ಮುನ್ನಡೆ ಸಂಘಟನೆಯ ಬಿ.ಡಿ. ಫಕೀರಪ್ಪ ಮಾತನಾಡಿ, ಪುರಸಭೆಯವರು ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ, ಊರಿನ ಹಿರಿಯರ ಅಭಿಪ್ರಾಯ ಪಡೆಯದೆ ಕಾಮಗಾರಿಗೆ ಪರವಾನಗಿ ನೀಡಿರುವುದು ಸರಿಯಲ್ಲ. ಕಾಮಗಾರಿ ಸ್ಥಳದಲ್ಲಿನ ಗಿಡ- ಮರಗಳನ್ನು ತೆರವುಗೊಳಿಸಿದ್ದಾರೆ. ಕಾಲೇಜಿನ ಕ್ಯಾಂಪಸ್‌ನಲ್ಲಿ ತಗಡಿನ ಶೆಡ್ ನಿರ್ಮಾಣ, ಕಬ್ಬಿಣ, ಮರಳು, ಖಡಿ ಇತರ ಸಾಮಗ್ರಿಗಳನ್ನು ಸಂಗ್ರಹಿಸಿ ನಿತ್ಯದ ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಪಡಿಸಿದ್ದಾರೆ. ಜಲಾಗಾರಕ್ಕೆ ಪುರಸಭೆಯವರು ಸೂಕ್ತ ಜಾಗ ಕಲ್ಪಿಸಿಕೊಟ್ಟು ಕಾಲೇಜಿನ ಕ್ಯಾಂಪಸ್‌ಗೆ ತೊಂದರೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. 
ಕಾಮಗಾರಿ ಸ್ಥಳಕ್ಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನಿಯರ್ ಜೆ.ಬಿ. ಹೊಸಮನಿ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು!.
"

ಲಕ್ಷ್ಮೇಶ್ವರ ಪಟ್ಟಣದಲ್ಲಿ ನೀರು ಸರಬರಾಜಿಗೆ ಅನಕೂಲಕರವಾದ ಸ್ಥಳದಲ್ಲಿ ಜಲಾಗಾರ ನಿರ್ಮಾಣ ಮಾಡಲಾಗುತ್ತಿದೆ. ಜಲಗಾರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವವರು ಪುರಸಭೆಯವರಿಗೆ ಲಿಖಿತ ರೂಪದಲ್ಲಿ ಬರೆಯಲಿ. ಪುರಸಭೆ ಅಧಿಕಾರಿಗಳ ನಿರ್ದೇಶನದಂತೆ ಗುತ್ತಿಗೆದಾರರು ನಡೆದುಕೊಳ್ಳುತ್ತಾರೆ. 

-ಜೆ.ಬಿ. ಹೊಸಮನಿ, ಇಂಜಿನಿಯರ್, ನಗರ ನೀರು ಸಬರಬರಾಜು ಇಲಾಖೆ