ರೋಣದ ಕೃಷಿ ಇಲಾಖೆ ಹಾಗೂ ಹೊಳೆಆಲೂರ ರೈತ ಸಂಪರ್ಕ ಕೇಂದ್ರದ ಆಶ್ರಯದಲ್ಲಿ ಅಸೂಟಿ ಗ್ರಾಮದಲ್ಲಿ ಕಡಲೆ ಬೆಳೆ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.
ಹೊಳೆಆಲೂರ: ಕೃಷಿ ವಿಜ್ಞಾನಿಗಳು ಒಕ್ಕಲುತನದಲ್ಲಿ ಇಳುವರಿ ಹೆಚ್ಚಳವಾಗಲು ಹಾಗೂ ರೈತರಿಗೆ ಲಾಭ ದೊರಕಿಸುವ ಉದ್ದೇಶದಿಂದ ಸಂಶೋಧನೆಯಲ್ಲಿ ತೊಡಗಿರುತ್ತಾರೆ. ಆದರೆ, ರೈತರು ಆಧುನಿಕ ಕೃಷಿಯ ಹೆಸರಿನಲ್ಲಿ ರಾಸಾಯನಿಕ (Chemical )ಬಳಕೆ ಮಾಡಿ ಭೂಮಿಯ ಫಲವತ್ತತೆ ನಾಶ ಮಾಡಬಾರದು ಎಂದು ರೋಣ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಆರ್. ತಹಶೀಲ್ದಾರ್ ಸಲಹೆ ನೀಡಿದರು.
ಕೃಷಿ ಇಲಾಖೆ ರೋಣ ಹಾಗೂ ರೈತ ಸಂಪರ್ಕ ಕೇಂದ್ರ ಹೊಳೆಆಲೂರ ಇವರ ಸಹಯೋಗದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿ ಮಂಗಳವಾರ ಅಸೂಟಿ ಗ್ರಾಮದ ಶರಣಪ್ಪ ಮಮಟಗೇರಿ ಅವರ ಹೊಲದಲ್ಲಿ ಏರ್ಪಾಟಾಗಿದ್ದ ಕಡಲೆ ಬೆಳೆ ಕ್ಷೇತ್ರೋತ್ಸವ ಹಾಗೂ ರೈತರಿಗೆ ಏರ್ಪಡಿಸಿದ್ದ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ರೈತರು ತಮ್ಮ ಹೊಲದ ಮಣ್ಣಿನ ಪರೀಕ್ಷೆ ಮಾಡಿ ಭೂಮಿಯಲ್ಲಿರುವ ಪೋಷಕಾಂಶಗಳನ್ನು ಅರಿತುಕೊಂಡು ಅಗತ್ಯವಿದ್ದಷ್ಟು ಮಾತ್ರ ರಾಸಾಯನಿಕ ಬಳಸಬೇಕು. ಉತ್ತಮ ಇಳುವರಿಯ ಅಪೇಕ್ಷೆ ಮಾಡುವವರು ಸಮಗ್ರ ಕೃಷಿಯ ತಂತ್ರಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡು ಉತ್ತಮ ತಳಿಯ ಬೀಜ ಹಾಗೂ ಸಲಕರಣೆ ಉಪಯೋಗಿಸಬೇಕು ಎಂದರು.
ಹೊಳೆಆಲೂರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡ್ರ ಮಾತನಾಡಿ, ಹಸಿರು ಕ್ರಾಂತಿಯಿಂದ ಆದ ಹಾನಿಯನ್ನು ಸರಿಪಡಿಸುವುದು ಮತ್ತು ಪರಿಸರ ಸಮತೋಲನ ಸಾಧಿಸುವುದು ಸಾವಯವ ಕೃಷಿಯಿಂದ ಮಾತ್ರ ಸಾಧ್ಯ. ಮಣ್ಣಿನ ಆರೋಗ್ಯ ಸುಧಾರಿಸುವುದರ ಜತೆಗೆ ಸಸ್ಯಗಳು, ಪ್ರಾಣಿಗಳು, ಮಾನವರು ಹಾಗೂ ಈ ಭೂಮಿಯನ್ನು ಉಳಿಸಿಕೊಂಡು, ಮುಂದಿನ ಪೀಳಿಗಿಗೆ ಶುದ್ಧ ನೀಡುವತ್ತ ನಾವು ಚಿಂತನೆ ಮಾಡಬೇಕಿದೆ ಎಂದು ಹೇಳಿದರು.