ಸೂಡಿ ಗ್ರಾಮದ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿತಗೊಂಡಿರುವ ಶ್ರೀಚಿದಂಬರೇಶ್ವರರು. 
ಗದಗ

Chaturveda ಸೂಡಿಯಲ್ಲಿ ಚತುರ್ವೇದ ಛಾತ್ರ ಸಮ್ಮೇಳನ 6ರಿಂದ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಚಿದಂಬರ ಮಹಾಸ್ವಾಮಿಯ 267ನೇ ಜನ್ಮ ದಿನೋತ್ಸವ
  • ಅಖಿಲ ಕರ್ನಾಟಕ ಚತುರ್ವೇದ ವಿದ್ಯಾರ್ಥಿ ಸಮ್ಮೇಳನ,
  • ಲಕ್ಷ ಗಣಪತಿ ಅಥರ್ವಶೀರ್ಷ ಪಾರಾಯಣ,
  • ಮುಖ್ಯ ಅರ್ಚಕ ಭುಜಂಗಶರ್ಮಾ ಜೋಷಿ ಮಾಹಿತಿ.
ನರೇಗಲ್ಲ: ಶ್ರೀ ಚಿದಂಬರ ಮಹಾಸ್ವಾಮಿಯ 267ನೇ ಜನ್ಮ ದಿನೋತ್ಸವದ ನಿಮಿತ್ಯ ಅಖಿಲ ಕರ್ನಾಟಕ ಚತುರ್ವೇದ (Chaturveda) ವಿದ್ಯಾರ್ಥಿ ಸಮ್ಮೇಳನ, ಲಕ್ಷ ಗಣಪತಿ ಅಥರ್ವಶೀರ್ಷ ಪಾರಾಯಣವನ್ನು ಸೂಡಿ ಗ್ರಾಮದ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಮುಖ್ಯ ಅರ್ಚಕ ಭುಜಂಗಶರ್ಮಾ ಜೋಷಿ ತಿಳಿಸಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸೋಮವಾರ ಕರೆಯಲಾದ ಸಭೆಯಲ್ಲಿ ಅವರು ಮಾತನಾಡಿದರು. ‘ಚತುರ್ವೇದ ಛಾತ್ರ ಸಮ್ಮೇಳನ ಎಂದು ಕರೆಯಲ್ಪಡುವ ಈ ಸಮ್ಮೇಳನವು ಬಹುಷಃ ಈ ಭಾಗದಲ್ಲಿ ಹಿಂದೆಂದೂ ಆಗಿಲ್ಲ. ಈ ಸಮ್ಮೇಳನದಲ್ಲಿ ಚತುರ್ವೇದ ಪಾಠ ಕಲಿಯುತ್ತಿರುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 50ಕ್ಕೂ ಹೆಚ್ಚು ವಿದ್ವಾಂಸರು ಭಾಗವಹಿಸಲಿದ್ದಾರೆ. ನ.6 ರಿಂದ 11 ರವರೆಗೆ ನಿತ್ಯವೂ ಕಾಕಡಾರುತಿ, ಅಭಿಷೇಕ, ಅಲಂಕಾರ, ಪಲ್ಲಕ್ಕಿ ಸೇವೆ, ಭಜನೆ, ಆರತಿ, ಅಷ್ಟಾವಧಾನಗಳು ನಡೆಯುತ್ತವೆ.
ನ. 6ರಂದು ಬೆಳಗ್ಗೆ 7.30ಕ್ಕೆ ಧರ್ಮ ಧ್ವಜಾರೋಹಣ. 10 ಗಂಟೆಗೆ ಛಾತ್ರ ಸಮ್ಮೇಳನಕ್ಕೆ ಆಗಮಿಸುವ ಬ್ರಹ್ಮಚಾರಿಗಳಿಂದ ಲಕ್ಷ ಗಣಪತಿ ಅಥರ್ವಶೀರ್ಷ ಪಾರಾಯಣವು ಹೊಸಪೇಟೆಯ ವಿದ್ವಾನ್ ಪಾರ್ಥಸಾರಥಿ ಶರ್ಮಾ ಜೋಷಿಯವರ ನೇತೃತ್ವದಲ್ಲಿ ಪ್ರಾರಂಭವಾಗುತ್ತದೆ.
ನ. 8ರಂದು ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ ಉದ್ಘಾಟಿಸಲಿದ್ದು, ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ ಅಧ್ಯಕ್ಷತೆ ವಹಿಸುವರು. ವಿದ್ವಾನ್ ಸುಜಯ ಶಾನಭಾಗ ನೃತ್ಯರೂಪಕ ಪ್ರದರ್ಶಿಸುವರು.
ನ. 9ರಂದು ಬೆಳಗ್ಗೆ 11 ಗಂಟೆಗೆ ಬ್ರಹ್ಮಚಾರಿ ಪೂಜೆ, 11.30ಕ್ಕೆ ಶ್ರೀ ಚಿದಂಬರ ಪಂಚಾಂಗ ಬಿಡುಗಡೆ ಜರುಗಲಿದ್ದು, ಮುರಗೋಡದ ಶ್ರೀದಿವಾಕರ ದೀಕ್ಷಿತರು ಸಾನ್ನಿಧ್ಯ ವಹಿಸುವರು. ಕೂಡಲಗಿಯ ಶ್ರೀ ಗಜಾನನಬಾಬಾ ಮಹಾರಾಜರು ಸಾನ್ನಿಧ್ಯ ವಹಿಸುವರು. ಕಮಡೊಳ್ಳಿಯ ಶಂಕರಭಟ್ಟ ಜೋಷಿ ಅಧ್ಯಕ್ಷತೆ ವಹಿಸುವರು. ಹೊಸಪೇಟಿಯ ಪಾರ್ಥಸಾರಥಿ ಶರ್ಮಾ ಜೋಷಿಯವರಿಗೆ ಶ್ರೀ ವಿರೂಪಾಕ್ಷಶಾಸ್ತ್ರೀ ಪುರಸ್ಕಾರ ನೀಡಲಾಗುತ್ತಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀ ಚಿದಂಬರ ಮಹಾಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
ಸಂಜೆ 6ಕ್ಕೆ ಶ್ರೀರಾಮ ಕಾಸರ ಅವರ ನೇತೃತ್ವದಲ್ಲಿ ಸಂಗೀತ ರಸಮಂಜರಿ ನಡೆಯಲಿದ್ದು, ಅನೇಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನ.10ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಚಿದಂಬರ ಜನ್ಮ ಆಖ್ಯಾನ ನಡೆಯಲಿದ್ದು, ವೇ.ಮೂ. ದಿಗಂಬರಶಾಸ್ತ್ರಿಗಳು ಕುರ್ತಕೋಟಿ ಆಖ್ಯಾನ ನೀಡಲಿದ್ದಾರೆ. ನಂತರ ತೊಟ್ಟಿಲೋತ್ಸವ ಜರುಗಲಿದೆ.
ನ.10ರಂದು ಸಮ್ಮೇಳನದ ಸಮಾರೋಪ ಮತ್ತು ರಥೋತ್ಸವ ಜರುಗಲಿದ್ದು, ಕೂಡಲಿ ಶೃಂಗೇರಿ ಪೀಠದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಅಗಡಿ-ಆನಂದವನದ ಶ್ರೀ ಗುರುದತ್ತಮೂರ್ತಿ ಚಕ್ರವರ್ತಿಗಳು ಸಾನ್ನಿಧ್ಯ ವಹಿಲಿಸದ್ದು, ಬೆಂಗಳೂರಿನ ಗಿರೀಶಶರ್ಮಾ ನೇತೃತ್ವ, ಚಿದಂಬರಭಟ್ಟ ಜೋಷಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಜಿ. ಎಸ್. ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ನರೇಗಲ್ಲದ ಡಾ. ಜಿ. ಕೆ. ಕಾಳೆಯವರಿಗೆ ಪುರಸ್ಕಾರ ಪ್ರದಾನ ಜರುಗಲಿದೆ.
  • ನ. 6ರಂದು ಬೆಳಗ್ಗೆ 7.30ಕ್ಕೆ ಧರ್ಮ ಧ್ವಜಾರೋಹಣ. 10 ಗಂಟೆಗೆ ಬ್ರಹ್ಮಚಾರಿಗಳಿಂದ ಲಕ್ಷ ಗಣಪತಿ ಅಥರ್ವಶೀರ್ಷ ಪಾರಾಯಣ
  • ನ. 8ರಂದು ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ವಿದ್ವಾನ್ ಸುಜಯ ಶಾನಭಾಗ ನೃತ್ಯರೂಪಕ ಪ್ರದರ್ಶಿಸುವರು.
  • ನ. 9ರಂದು ಬೆಳಗ್ಗೆ 11 ಗಂಟೆಗೆ ಬ್ರಹ್ಮಚಾರಿ ಪೂಜೆ, 11.30ಕ್ಕೆ ಶ್ರೀ ಚಿದಂಬರ ಪಂಚಾಂಗ ಬಿಡುಗಡೆ, ಮಧ್ಯಾಹ್ನ 3 ಗಂಟೆಗೆ ಶ್ರೀ ಚಿದಂಬರ ಮಹಾಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ.
  • ನ.10ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಚಿದಂಬರ ಜನ್ಮ ಆಖ್ಯಾನ, ತೊಟ್ಟಿಲೋತ್ಸವ, ಸಮ್ಮೇಳನದ ಸಮಾರೋಪ ಮತ್ತು ರಥೋತ್ಸವ,