ನರಗುಂದದ ಶ್ರೀ ಪಂಚಮುಖಿ ಮಾರುತಿ ದೇವಸ್ಥಾನದ ಜಾತ್ರಾ ಮಹೋತ್ಸವ, ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರನ್ನು ಸನ್ಮಾನಿಸಲಾಯಿತು.
ನರಗುಂದ: ಹನುಮ ಜಯಂತಿ ಪ್ರಯುಕ್ತ ಪಟ್ಟಣದ ನವೋದಯ ನಗರ ಬಡಾವಣೆಯ ಶ್ರೀ ಪಂಚಮುಖಿ ಮಾರುತಿ ದೇವಸ್ಥಾನದ 8ನೇ ವರ್ಷದ ಜಾತ್ರಾ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ಗುರುವಾರ ಜರುಗಿತು.
ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದ ಪಂಚಗೃಹ ಗುಡ್ಡದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಶ್ರೀರಾಮನ ಭಕ್ತ ಹನುಮಂತನನ್ನು ಪೂಜಿಸುವುದರಿಂದ ಸಂತೋಷ, ಶಾಂತಿ, ಆರೋಗ್ಯ ಮತ್ತು ಸಂಪತ್ತು ದೊರೆಯುತ್ತದೆ.
ಹನುಮಂತ ದೇವರನ್ನು ಶನಿವಾರ, ಮಂಗಳವಾರ ವಿಶೇಷವಾಗಿ ಪೂಜಿಸಲಾಗುತ್ತದೆ. ಸುಂದರ ಕಾಂಡ ಅಥವಾ ಹನುಮಾನ್ ಚಾಲೀಸಾ Hanuman Chalisa ಪಠಿಸುವುದರಿಂದ ಭಕ್ತರ ಪ್ರತಿಯೊಂದು ಸಂಕಷ್ಟಗಳು ದೂರಾಗುತ್ತದೆ ಎಂದರು.
ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಲ್ಲಸರ್ಜುನ ದೇಸಾಯಿ ಮಾತನಾಡಿ, ನವೋದಯ ನಗರದ ಪಂಚಮುಖಿ ಮಾರುತೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಸಿದ್ದಪ್ಪ ಮುಳಿಕ ಅವರು ನಿವೇಶನ ನೀಡಿದ್ದರು. ಬಡಾವಣೆಯ ಎಲ್ಲ ಗುರು- ಹಿರಿಯರು ಮಾರುತೇಶ್ವರ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತಮ್ಮ ತನು, ಮನ, ಧನದಿಂದ ನಿರಂತರ ಸೇವೆ ಸಲ್ಲಿಸಿದ್ದಾರೆ ಎಂದರು.
ಹನುಮ ಜಯಂತಿ, ಜಾತ್ರಾ ಮಹೋತ್ಸದ ಪ್ರಯುಕ್ತ ಬೆಳಗ್ಗೆ ರುದ್ರಾಭಿಷೇಕ, ತೊಟ್ಟಿಲೋತ್ಸವ, ಸಮಮಂಗಲೆಯರಿಂದ ಆರತಿ, ಕುಂಭಮೇಳ ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಅದ್ಧೂರಿ ಪಲ್ಲಕ್ಕಿ ಉತ್ಸವ ಮೆರವಣಿಗೆ ಜರುಗಿತು.
ವೈ.ಬಿ. ನಾಯ್ಕರ, ವಿ.ಎಸ್. ಕೋಟಿ, ಜಿ.ಬಿ. ಕಂಠೆಣ್ಣವರ, ವಾಸುದೇವ ಸೂರ್ಯವಂಶಿ, ಎಸ್.ಬಿ. ಪೊಲೀಸಪಾಟೀಲ, ನಾಗರಾಜ ಉದ್ದಣ್ಣವರ, ಸಿ.ಬಿ. ಶೀಲವಂತರ, ನವೀನಗೌಡ ಪಾಟೀಲ, ಎ.ಜಿ. ಅರಗಂಜಿ, ಬಸವರಾಜ ಅಂಗಡಿ, ಉಮೇಶ, ಶಿವಾನಂದ ಉದ್ದಣ್ಣವರ, ಇತರರಿದ್ದರು.