ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಿಂದ ಪೂಜಾ ಮಾದರ, ಸುಮೀತ ಹಿರೇಮಠ, ಮುಧೋಳೆ ಅವರನ್ನು ಸನ್ಮಾನಿಸಲಾಯಿತು. ಶ್ರೀಶಾಂತಲಿಂಗ ಸ್ವಾಮೀಜಿ, ಡಾ.ಜಗದೀಶ ತಳವಾರ, ವೈ.ಎಂ. ಭಜಂತ್ರಿ, ರಾಮು ಎಂ.ಎಸ್, ಇತರರಿದ್ದರು.
ನರಗುಂದ: ನುಲಿಯ ಚಂದಯ್ಯನವರು ಗುರು, ಲಿಂಗ, ಜಂಗಮ ತತ್ವವನ್ನು ಇಡೀ ಜಗತ್ತಿಗೆ ಪಸರಿಸಿ, ಕಾಯಕದ ಮಹತ್ವ ಮೈಗೂಡಿಸಿಕೊಂಡು ನುಡಿದಂತೆ ನಡೆದ ಶ್ರೇಷ್ಠ ವಚನಕಾರ. ಬಸವಣ್ಣನ ವಿನೂತನ ವಿಚಾರ ಧಾರೆಗಳು, ಧಾರ್ಮಿಕ ಚಿಂತನೆಗೆ ಆಕರ್ಷಿತರಾದ ನುಲಿಯ ಚಂದಯ್ಯ (CHANDAYYA) ಸ್ವಗ್ರಾಮ ಶಿವಣಗಿಯಿಂದ ಕಲ್ಯಾಣಕ್ಕೆ ಬಂದ ಬಳಿಕ ಹುಲ್ಲಿನಿಂದ ಹಗ್ಗ ಹೊಸೆದು ದುಡಿಮೆಯ ಘನತೆಯ ಬಗ್ಗೆ ತಿಳಿಸಿದರು ಎಂದು ಶ್ರೀಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯನವರ ಜಯಂತಿ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
12ನೇ ಶತಮಾನದ ಶರಣ ಪರಂಪರೆಯಲ್ಲಿ ನುಲಿಯ ಚಂದಯ್ಯನವರು ರಚಿಸಿದ ವಚನಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ. ನುಲಿಯ ಚಂದಯ್ಯನವರಂತಹ ಶರಣರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿಶ್ರಾಂತ ಪ್ರಾಧ್ಯಾಪಕ ಡಾ. ವೈ.ಎಂ. ಭಜಂತ್ರಿ ಮಾತನಾಡಿ, ಜಗಜ್ಯೋತಿ ಬಸವಣ್ಣನವರು ಸೇರಿದಂತೆ ಅನೇಕ ಶಿವಶರಣರು ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ ಎಂದರು.
ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ರಡ್ಡೇರ ನಾಗನೂರಿನ ಪೂಜಾ ಮಾದರ, ನರಗುಂದದ ಸುಮೀತ ಹಿರೇಮಠ, ಮುಧೋಳೆ ಅವರನ್ನು ಸತ್ಕರಿಸಲಾಯಿತು. ವಿಶ್ರಾಂತ ಕುಲಸಚಿವ ಡಾ.ಚಂದ್ರಮೌಳಿ ನಾಯ್ಕರ, ನಿವೃತ್ತ ಪ್ರಾಚಾರ್ಯ ಡಾ.ಅರ್ಜುನ ಗೊಳಸಂಗಿ, ಎಸ್.ಜಿ. ಮಣ್ಣೂರಮಠ, ಎಸ್.ಎಸ್. ಪೂಜಾರ, ಪ್ರಹ್ಲಾದಗೌಡ ಪಾಟೀಲ, ರೇವಣಸಿದ್ದಯ್ಯ ಹಿರೇಮಠ, ಮಂಗಳಾ ಪಾಟೀಲ, ಡಾ. ಸಿ.ಕೆ. ರಾಚನಗೌಡ್ರ, ಡಾ. ಜಗದೀಶ ತಳವಾರ, ಡಾ. ರಾಮು ಎಂ.ಎಸ್ ಉಪಸ್ಥಿತರಿದ್ದರು. ಪ್ರೊ. ಆರ್.ಕೆ. ಐನಾಪೂರ, ಮಹಾಂತೇಶ ಹಿರೇಮಠ ನಿರ್ವಹಿಸಿದರು.