ಬೆಂಬಲ ಬೆಲೆಯಡಿ ಗೋವಿನಜೋಳ ಖರೀದಿಸುವ ಮಿತಿಯನ್ನು 50 ಕ್ವಿಂಟಾಲ್‌ಗೆ ಹೆಚ್ಚಿಸಿ ಸರ್ಕಾರ ಆದೇಶ ಮಾಡಿದ ಹಿನ್ನೆಲೆಯಲ್ಲಿ ಸಮಗ್ರ ರೈತ ಹೋರಾಟ ವೇದಿಕೆ ವತಿಯಿಂದ ರೈತರು ಲಕ್ಷ್ಮೇಶ್ವರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 
ಗದಗ

celebration: ಮೆಕ್ಕೆಜೋಳ ಖರೀದಿ ಮಿತಿ ಹೆಚ್ಚಳಕ್ಕೆ ಹರ್ಷ

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ಲಕ್ಷ್ಮೇಶ್ವರ
ಬೆಂಬಲ ಬೆಲೆಯಲ್ಲಿ ಗೋವಿನಜೋಳ ಖರೀದಿಸುವ ಮಿತಿಯನ್ನು 50 ಕ್ವಿಂಟಾಲ್‌ಗೆ ಹೆಚ್ಚಿಸಿ ಸರ್ಕಾರ ಆದೇಶ ಮಾಡಿದ ಹಿನ್ನೆಲೆಯಲ್ಲಿ ಸಮಗ್ರ ರೈತ ಹೋರಾಟ ವೇದಿಕೆ ವತಿಯಿಂದ ನೂರಾರು ರೈತರು ಲಕ್ಷ್ಮೇಶ್ವರದಲ್ಲಿ ಭಾನುವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಭಾನುವಾರ ಮಧ್ಯಾಹ್ನ ಸರ್ಕಾರ ಮೆಕ್ಕೆಜೋಳ ಖರೀದಿ ಮಿತಿಯನ್ನು 50 ಕ್ವಿಂಟಾಲ್‌ಗೆ ಹೆಚ್ಚಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಹರ್ಷಗೊಂಡ ರೈತರ ಶಿಗ್ಲಿ ನಾಕಾ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಹರ್ಷವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಮಗ್ರ ರೈತ ಹೋರಾಟ ವೇದಿಕೆ ಅಧ್ಯಕ್ಷ ಮಂಜುನಾಥ ಮಾಗಡಿ, ಗೋವಿನಜೋಳ ಖರೀದಿ ಕೇಂದ್ರ ಪ್ರಾರಂಭಿಸಿದಾಗ ಮೊದಲು 5 ಕ್ವಿಂಟಾಲ್ ಮಿತಿಗೊಳಿಸಿ ಆದೇಶ ನೀಡಿತ್ತು. ನಂತರ ಎರಡು ಮೂರು ದಿನಗಳಲ್ಲಿ ಅದನ್ನು 20 ಕ್ವಿಂಟಾಲ್‌ಗೆ ಏರಿಕೆ ಮಾಡಿತ್ತು. ಆದರೆ, ಈ ಬಾರಿ ಗೋವಿನಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿರುವ ಹಿನ್ನೆಲೆಯಲ್ಲಿ ಖರೀದಿ ಮಿತಿಯನ್ನು 40-50 ಕ್ವಿಂಟಾಲ್ ಹೆಚ್ಚಿಸುವುದಕ್ಕೆ ಬೇಡಿಕೆ ಇಡಲಾಗಿತ್ತು. ಇದೀಗ ಸರ್ಕಾರ 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ತೀರ್ಮಾನ ತೆಗೆದುಕೊಂಡಿದ್ದು ಸಂತಸದ ವಿಚಾರ. ಈ ನಿರ್ಧಾರ ತೆಗೆದುಕೊಂಡ ಸರ್ಕಾರಕ್ಕೆ ರೈತರು ಧನ್ಯವಾದ ಅರ್ಪಿಸುತ್ತಾರೆ ಎಂದರು.
ಖರೀದಿ ನೋಂದಣಿ ವೇಳೆ ಸರ್ವರ ಸಮಸ್ಯೆ ತಲೆದೂರುತ್ತಿದೆ. ಜಿಲ್ಲಾಧಿಕಾರಿಗಳು ಈ ಕುರಿತು ವಿಶೇಷ ಕ್ರಮ ತೆಗೆದುಕೊಂಡು ಆದಷ್ಟು ಶೀಘ್ರ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ರವಿಕಾಂತ ಅಂಗಡಿ, ಎಂ.ಎಸ್.ದೊಡ್ಡಗೌಡ್ರ, ನೀಲಪ್ಪ ಶೆರಸೂರಿ, ನಾಗರಾಜ ಚಿಂಚಲಿ, ಟಾಕಪ್ಪ ಸಾತಪೊತೆ, ಮುದಕಣ್ಣ ಗದ್ದಿ, ಗುರಪ್ಪ ಮುಳಗುಂದ, ಮಂಜುನಾಥ ಶೆರಸೂರಿ, ಗಂಗಾಧರ ಖರಾಟೆ, ಶಿವಾನಂದ ಲಿಂಗಶೆಟ್ಟಿ, ಮಲ್ಲಿಕಾರ್ಜುನ ನೀರಾಲೋಟ ಫಕ್ಕಿರೇಶ ಅಣ್ಣಿಗೇರಿ, ಸಿದ್ದನಗೌಡ ಬಳ್ಳೂಳ್ಳಿ, ಮಂಜುನಾಥ ಕೊಡಳ್ಳಿ, ಸುರೇಶ ಹಟ್ಟಿ, ಬಸವರಾಜ ಜಾಲಗಾರ, ಶಿವನಗೌಡ ಅಡರಕಟ್ಟಿ, ಬಟ್ಟೂರ, ಅಭಯ ಜೈನ್, ಪ್ರಕಾಶ ಮೇವುಂಡಿ, ಶಿವನಗೌಡ ಪಾಟೀಲ್, ಕರಿಯಪ್ಪ ಹುರಕನವರ, ಮುತ್ತಣ್ಣ ಟೋಕಾಳಿ ಇತರರಿದ್ದರು.