ನರಗುಂದದಲ್ಲಿ ಕಿತ್ತೂರರಾಣಿ ಚನ್ನಮ್ಮ ಸಮುದಾಯ ಭವನ ನಿರ್ಮಿಸುವ ಕುರಿತು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾಜ ಬಾಂಧವರ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು. ಡಾ.ಸಿ.ಕೆ. ರಾಚನಗೌಡ್ರ, ಎಸ್.ಆರ್. ಪಾಟೀಲ, ಬಿ.ಎಂ. ಬೆಳಹಾರ, ಶಿವಾನಂದ ಮುತವಾಡ, ಇತರರಿದ್ದರು.
ನರಗುಂದ: ಪಟ್ಟಣದಲ್ಲಿ 12 ಕೋಟಿ ರೂ. ವೆಚ್ಚದ ಸುಸಜ್ಜಿತ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. 2 ಎಕರೆ ವಿಸ್ತೀರ್ಣದಲ್ಲಿ ಭವನದ ಭೂಮಿಪೂಜೆ ನೆರವೇರಲಿದೆ ಎಂದು ಶಾಸಕ ಸಿ.ಸಿ. ಪಾಟೀಲ(C.C. Patil) ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲಿಂಗಾಯಿತ ಪಂಚಮಸಾಲಿ ಸಮಾಜದ ವಿವಿಧೋದ್ದೇಶ ಸಂಘದಿಂದ ಹಮ್ಮಿಕೊಂಡಿದ್ದ ಸಮುದಾಯ ಭವನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ‘ಸಮುದಾಯ ಭವನ ನಿರ್ಮಾಣಕ್ಕಾಗಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದಾಗ 50 ಲಕ್ಷ ರೂ. ಅನುದಾನ ನೀಡಿದ್ದರು. ಆದರೆ, ಸೂಕ್ತ ನಿವೇಶನವಿಲ್ಲದ ಕಾರಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈ ಹಿಂದೆ ನಾನು ಅರಣ್ಯ-ಪರಿಸರ ಖಾತೆ ಸಚಿವನಾಗಿದ್ದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಕಾನೂನಾತ್ಮಕವಾಗಿ ಚರ್ಚಿಸಿದ ಬಳಿಕ ನೀರಾವರಿ ಇಲಾಖೆಯ 2 ಎಕರೆ ಜಮೀನನ್ನು ಸಮುದಾಯ ಭವನ ನಿರ್ಮಾಣಕ್ಕೆ ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಳ್ಳಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಪ್ರತಿಯೊಂದು ಕ್ಷೇತ್ರಗಳಿಗೆ 52 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದ್ದರು. ಆದರೆ, ನಿಗಧಿತ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದ ಕಾರಣವೋ ಅಥವಾ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಸದುದ್ದೇಶದಿಂದಲೋ ಸಂಪೂರ್ಣಅನುದಾನ ವಾಪಸ್ ಪಡೆಯಲಾಗಿತ್ತು. ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ತಕ್ಷಣ ಭೇಟಿ ಮಾಡಿ ನರಗುಂದದ ಕಿತ್ತೂರರಾಣಿ ಚನ್ನಮ್ಮ ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ಅನುದಾನ ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗಿತ್ತು. ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ 2 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದ್ದಾರೆ. ನನ್ನ ಶಾಸಕರ ಅನುದಾನದಲ್ಲಿಯೂ 50 ಲಕ್ಷ ರೂ. ಅನುದಾನವನ್ನು ನಿರ್ಮಿತಿ ಕೇಂದ್ರದಿಂದ ನೀಡಿದ್ದೇನೆ. ವೈಯಕ್ತಿಕವಾಗಿ ಇನ್ನೂ 1 ಕೋಟಿ ರೂ. ಕೊಡುತ್ತೇನೆ. ಸಮಾಜದ ಎಲ್ಲ ಗುರು ಹಿರಿಯರು ದಿನಾಂಕ ನಿಗಧಿಪಡಿಸಿ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸೋಣ. ಪಂಚಮಸಾಲಿ ಸಮಾಜದ ಮುಖಂಡರು ಹೈಟೆಕ್ ಸಮುದಾಯ ಭವನ ನಿರ್ಮಾಣಕ್ಕೆ ವಾಗ್ದಾನ ಮಾಡಿರುವಂತೆ ಏ.15 ರೊಳಗಾಗಿ ದೇಣಿಗೆ ಪಾವತಿಸಬೇಕೆ ಎಂದು ಸಿ.ಸಿ.ಪಾಟೀಲ ತಿಳಿಸಿದರು.
ಡಾ. ಸಿ.ಕೆ. ರಾಚನಗೌಡ್ರ, ಎಸ್.ಆರ್. ಪಾಟೀಲ, ಶಿವಾನಂದ ಮುತವಾಡ, ಬಿ.ಎಂ. ಬೆಳಹಾರ, ಎಂ.ಬಿ. ಮೆಣಸಗಿ, ಗುರುಪಾದಪ್ಪ ಕುರಹಟ್ಟಿ, ಆರ್.ಎನ್. ಪಾಟೀಲ, ದೇಸಾಯಿಗೌಡ ಪಾಟೀಲ, ಡಾ. ವಿ.ಎಸ್. ಪಾಟೀಲ, ಡಾ.ಎಫ್.ಕೆ. ಸವದತ್ತಿ, ಶಂಕರಗೌಡ ಪಾಟೀಲ, ಉಮೇಶಗೌಡ ಪಾಟೀಲ, ನಿಂಗಣ್ಣ ಗಾಡಿ, ಭೀಮಪ್ಪ ಯಾವಗಲ್, ಸಂಗು ಪಾಟೀಲ, ಪರ್ವತಗೌಡ್ರ, ಬಿ.ಎಸ್. ಸವದಿ, ಮುತ್ತನಗೌಡ ಮುಲ್ಕಿಪಾಟೀಲ, ಶಿವಪ್ಪ ಬೋಳಶೆಟ್ಟಿ, ಅಲೋಕಗೌಡ ಪಾಟೀಲ ಉಪಸ್ಥಿತರಿದ್ದರು.