ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಕ್ಕ-ತಮ್ಮ.
- ಪುಟ್ಟ ಹಳ್ಳಿಯ ಸಹೋದರಿ, ಸಹೋದರನ ಸಾಧನೆ
- ಕಾರ್ಗಿಲ್ ಇವರಿಗೆ ಪ್ರೇರಣೆ!
ಅಪ್ಪನಿಗೆ ಆರೋಗ್ಯ ಸಮಸ್ಯೆ, ಹೊಲ-ಮನೆ ಕೆಲಸವೆಲ್ಲ ಅಮ್ಮನದೇ. ಬಾಡಿಗೆ ಮನೆಯಲ್ಲಿ ವಾಸ. ಇರುವುದು ಒಂದೂವರೆ ಎಕರೆ ಭೂಮಿ ಮಾತ್ರ. ಈ ಮಧ್ಯೆ ತಂದೆಯೂ ಅಗಲಿದರು. ಕಡುಬಡತನದ ಬದುಕು. ಅದನ್ನೇ ಸವಾಲಾಗಿ ಸ್ವೀಕರಿಸಿದ ಅಕ್ಕ-ತಮ್ಮ ಕಷ್ಟಪಟ್ಟು ಓದಿ ಇದೀಗ ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. ಕಾರ್ಗಿಲ್ ಯುದ್ಧದ ಕತೆಯೇ ಇವರಿಗೆ ಪ್ರೇರಣೆಯಂತೆ!
ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಮಂಜುಳಾ ಚನ್ನಪ್ಪ ಕಲ್ಯಾಣಿ ಹಾಗೂ ಮಹೇಶ ಚನ್ನಪ್ಪ ಕಲ್ಯಾಣಿ ಅವರ ಕಠಿಣ ಸಾಧನೆಯ ಕತೆ ಇದು. ಚಿಕ್ಕಂದಿನಿಂದಲೂ ಕಾರ್ಗಿಲ್ ಹೋರಾಟಗಾರರ ಸಾಹಸ ಸೇರಿದಂತೆ ಸೈನಿಕರ ಪರಾಕ್ರಮದ ಕುರಿತು ಕೇಳುತ್ತ ಬೆಳೆದಿದ್ದ ಇಬ್ಬರೂ ಸಶಸ್ತ್ರ ಪಡೆ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ. ಪುಟ್ಟ ಹಳ್ಳಿಯ ಈ ಕುಡಿಗಳ ದಾರಿ ಇತರರಿಗೆ ಮಾದರಿಯಾಗಿದೆ.
2024ರಲ್ಲಿ ಏರ್ಪಾಟಾಗಿದ್ದ ಅಗ್ನಿವೀರ ರ‌್ಯಾಲಿಯಲ್ಲಿ ಮಹೇಶ ಕಲ್ಯಾಣಿ ನೇಮಕ ಆಗಿ ಪ್ರಸ್ತುತ ಹರಿಯಾಣದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ತಮ್ಮ ಸೇನೆಗೆ ಸೇರಿದ ಕೇವಲ ಮೂರು ತಿಂಗಳಲ್ಲಿ ಅಕ್ಕ ಮಂಜುಳಾ ಪಶ್ಚಿಮ ಬಂಗಾಳದ ಗಡಿ ಭದ್ರತಾ ಪಡೆ (ಬಿಎಸ್‌ಎಫ್- ಪ್ಯಾರಾ ಮಿಲಿಟರಿ)ಗೆ ಆಯ್ಕೆಯಾಗಿ ಎರಡು ವರ್ಷಗಳಿಂದ ಭಾರತಾಂಬೆಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಗಡಿ ಭದ್ರತಾ ಪಡೆಗೆ (ಸೇನೆ) ನೇಮಕವಾದ ತಾಲೂಕಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಮಂಜುಳಾ ಪಾತ್ರರಾಗಿದ್ದಾರೆ.
ಕುರುಗೋವಿನಕೊಪ್ಪದ ಚನ್ನಪ್ಪ-ಮಹಾದೇವಿ ದಂಪತಿಯ ನಾಲ್ವರು ಮಕ್ಕಳಲ್ಲಿ ಮಹೇಶ ಕೊನೆಯವರು. ಕುಟುಂಬದ ಎಲ್ಲ ಜವಾಬ್ದಾರಿಗಳ ಜತೆಗೆ ತಾಯಿ ಮಹಾದೇವಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತ ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಹಿರಿಯ ಮಗಳು ಮೀನಾಕ್ಷಿ ಬಿಕಾಂ, ಬಸವರಾಜ ಕೃಷಿ ಡಿಪ್ಲೊಮಾ ಓದಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಪೂರ್ಣಗೊಳಿಸಿರುವ ಮಂಜುಳಾ ಡಿಪ್ಲೊಮಾ ಅಗ್ರಿಕಲ್ಚರ್ ಪದವೀಧರೆ. ಈಕೆಯ ಸಹೋದರ ಮಹೇಶ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ನರಗುಂದದಲ್ಲಿ ಬಿಎ 3ನೇ ಸೆಮಿಸ್ಟರ್ ಓದುವಾಗ ಅಗ್ನಿವೀರ ನೇಮಕಾತಿ ಹೊಂದಿದ್ದರು. ದುರ್ದೈವದ ಸಂಗತಿಯೆಂದರೆ ಮಹೇಶ ಸೇನೆಯ ತರಬೇತಿಗೆ ತೆರಳಿದ್ದಾಗ ತಂದೆ ಚನ್ನಪ್ಪ ಅನಾರೋಗ್ಯದಿಂದ ಸಾವನ್ನಪ್ಪಿದರು. ತಂದೆಯ ಶವ ಸಂಸ್ಕಾರ, ತಿಥಿ (ಶ್ರಾದ್ಧ) ಕಾರ್ಯಕ್ಕೂ ಬರಲಾರದಂಥ ಪರಿಸ್ಥಿತಿ. ತಂದೆಯ ಸಾವಿನ ದುಃಖ, ಕುಟುಂಬದ ಆರ್ಥಿಕ ದುಸ್ಥಿತಿಯ ನೋವಿನಲ್ಲೂ ಛಲ ಬಿಡದೆ ತರಬೇತಿ ಪೂರ್ಣಗೊಳಿಸಿ ದೇಶ ಸೇವೆಯಲ್ಲಿ ನಿರತನಾಗಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿದ್ದ ಮಂಜುಳಾ ಅವರು, ತಮ್ಮ ತಂದೆ ತೀರಿದ ಮೂರು ತಿಂಗಳಲ್ಲಿ ಬಿಎಸ್‌ಎಫ್ ಜಿಡಿ ಪರೀಕ್ಷೆ, ದೈಹಿಕ ಶಿಕ್ಷಣ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿದ್ದರು. ನಂತರ ಪಶ್ಚಿಮ ಬಂಗಾಳದ ಗಡಿ ಭದ್ರತಾ ಪಡೆಯಲ್ಲಿ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಅಕ್ಕ-ತಮ್ಮ ಕಷ್ಟಪಟ್ಟು ಓದಿದ್ದಕ್ಕೆ ಫಲ ಸಿಕ್ಕಿದೆ. ಪುಟ್ಟ ಹಳ್ಳಿಯಲ್ಲಿ ಜನಿಸಿದರೂ ದೇಶ ಸೇವೆಗೈಯುತ್ತಿರುವ ಮಂಜುಳಾ ಹಾಗೂ ಮಹೇಶನ ಸಾಧನೆ ಇಡೀ ಕುಟುಂಬದ ಘನತೆ, ಗೌರವವನ್ನು ಹೆಚ್ಚಿಸಿದೆ ಎಂದು ತಾಯಿ ಮಹಾದೇವಿ ಕಲ್ಯಾಣಿ, ಕಾರ್ಗಿಲ್ ವಿಜಯ ದಿವಸ(ಜು. 26)ದ ಮುನ್ನಾದಿನ ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡರು.