ಗದಗ:ನಗರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ರಾಜಕೀಯ ಸಮರ ಏರ್ಪಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಟೀಕಾಸ್ತ್ರ, ಬ್ರಹ್ಮಾಸ್ತ್ರ ಶರುವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆರೋಪ ಪ್ರತ್ಯಾರೋಪಗಳು ಸುರಿಮಳೆಯಾಗುತ್ತಿದೆ.
ನಗರದಲ್ಲಿ ವಿವಿಧ ವಾರ್ಡಗಳಲ್ಲಿ ಅಂದಾಜು 10 ರಿಂದ 22 ದಿನಗಳ ಅಂತರದಲ್ಲಿ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು, ಹಲವು ಪ್ರತಿಭಟನೆಗಳು ಶುರುವಾಗಿದೆ. ಈ ಹಿನ್ನೆಲೆ ಇತ್ತೀಚೆಗೆ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಕುಡಿಯುವ ನೀರಿಗಾಗಿ ಬೃಹತ್ ಪ್ರತಿಭಟನೆ ನಡೆಯಿತು. ಎರಡೂ ಸಾವಿರಕ್ಕೂ ಹೆಚ್ಚು ಜನ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಗರಸಭೆ ಮುತ್ತಿಗೆ ಯತ್ನಗಳು ನಡೆದವು. ಈ ಬೆಳವಣಿಗೆ ರಾಜಕೀಯ ಶೀತಲ ಸಮರಕ್ಕೆ ನಾಂದಿಯಾಯಿತು. ಕಾಂಗ್ರೆಸ್ ಬಿಜೆಪಿ ಮುಖಂಡರು, ಕಾರ್ಯಕರ್ತರ ನಡುವೆ ನೀರಿನ ಹಕ್ಕು ಸ್ಥಾಪನೆಗಾಗಿ ಕುಸ್ತಿ ಶುರುವಾಗಿದೆ.
ಕುಡಿಯುವ ನೀರಿಗಾಗಿ ನಡೆದ ಪ್ರತಿಭಟನೆ ನಂತರ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರಲ್ಲಿ ಕುತೂಹಲ, ಹುಮ್ಮಸ್ಸು, ಒಳ ಹುರುಪು ಶರುವಾಗಿದೆ. ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆದಿರಲಿಲ್ಲ. ರಾಜಕೀಯ ವಾಕ್ಸಮರ, ಒಳಧ್ವೇಷ ಮುನಿಸು ಪ್ರಕರಣಗಳು ನಡೆಯದೇ ಕಾರ್ಯಕರ್ತರು ರಾಜಕೀಯ ವಿಷಯದಲ್ಲಿ ನಿಸ್ತೇಜಗೊಂಡಿದ್ದರು. ನೀರಿಗಾಗಿ ನಡೆದ ಬೃಹತ್ ಪ್ರತಿಭಟನೆ ನಂತರ ಮಲಗಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಅಶ್ವವೇಗದಂತೆ ಹುಮ್ಮಸ್ಸು ಬಂದಿದೆ. ಈ ವರೆಗೆ ಬಿಜೆಪಿ ಬಗ್ಗೆ ನಿರ್ಲಕ್ಷ ಭಾವನೆ ಹೊಂದಿದ್ದ ಕಾಂಗ್ರೆಸ್ ಪಕ್ಷವನ್ನು ಎಚ್ಚರಿಸಿದಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಯುದ್ಧಶುರವಾಗಿದ್ದು, ಕಾರ್ಯಕರ್ತರು ಹೊಸ ಪ್ರತಿಭಟನಾ ಶೈಲಿ ಅಳವಡಿಸಿಕೊಂಡಿದ್ದಾರೆ. ನೀರಾವರಿ ಯೋಜನೆ, ವೈಯಕ್ತಿಕ ತ್ಯೇಜೋವಧೆಗೆ ಸಂಬಂಧಿಸಿದಂತೆ ಕಾರ್ಟೂನ ಹಾಕಿ ಆರೋಪ ಪ್ರತ್ಯಾರೋಪದಲ್ಲಿ ತೋಡಗಿದ್ದಾರೆ.
ಬಿಜೆಪಿ ಪ್ರತಿಭಟನೆ ನಂತರ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿದ ಸ್ಕಾನರ್ ಪೋಸ್ಟನಿಂದ ಶುರುವಾದ ಸಾಮಾಜಿಕ ಜಾಲತಾಣ ಸಮರ ಈಗ ಪ್ರತಿದಿನ ಸುದ್ದಿಗೋಷ್ಟಿಗಳಿಗೆ ಬಂದು ನಿಂತಿದೆ. ನಗರದಲ್ಲಿ ನೀರು ಪೂರೈಕೆ ದಿನಗಳ ಕುರಿತು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಮಾಡಿತ್ತು. ಅದರಲ್ಲಿ ನೀರು ಪೂರೈಕೆ ದಿನಗಳ ಅಂತರ ಅಧಿಕವಾಗಿದೆ ಎಂದು ಆರೋಪಿಸಿ ಬಿಜೆಪಿ ಸುದ್ದಿಗೋಷ್ಠಿ ನಡೆಸಿದೆ. ಇದಾದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ನಿರಂತರ ಸುದ್ದಿಗೋಷ್ಠಿ ನಡೆಸಿ ಆರೋಪ ಪ್ರತ್ಯಾರೋಪದಲ್ಲಿ ತೋಡಗಿವೆ. ಮುಂದುವರಿದು, ನಿರಂತರ ಕುಡಿಯುವ ನೀರಿನ ಯೋಜನೆಯ ಪೈಪಲೈನ್ ದುರಸ್ತಿಗಾಗಿ ಅಮೃತ 2.0 ಯೋಜನೆಯಡಿ 50 ಕೋಟಿಗೂ ಅಧಿಕ ಹಣ ಬಿಡುಗಡೆ ಆಗಿದೆ. ಈ ಯೋಜನೆ ಕೇಂದ್ರ ಸರ್ಕಾರದ್ದು ಎಂದು ಬಿಜೆಪಿ, ರಾಜ್ಯ ಸರ್ಕಾರದ್ದು ಎಂದು ಕಾಂಗ್ರೆಸ್ ಪಕ್ಷ ಹಕ್ಕು ಸಾಧಿಸುತ್ತಿವೆ.
ನಗರದಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಜೆಪಿ ನಡುವೆ ಆಗಾಗ ಇಂತಹ ಸಮರಗಳು ನಡೆಯುತ್ತಲೆ ಇರುತ್ತವೆ. ಆದರೆ ಜನರಿಗೆ ನೀರಿನ ಬವಣೆ ತಪು$್ಪವುದು ಯಾವಾಗ ಎಂಬ ಪ್ರಶ್ನೆ ಜನರನ್ನು ಕಾಡುತ್ತಲೆ ಇರುತ್ತದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದ ಬಳಿ ಹರಿದಿರುವ ತುಂಗಭದ್ರಾ ನದಿಯಿಂದ ನೀರು ಎತ್ತುವಳಿ ಮೂಲಕ ಅಂದಾಜು 80 ಕಿಮೀ ದೂರದ ಗದಗ ನಗರಕ್ಕೆ ಕುಡಿಯುವ ನೀರು ಪೂರೈಕೆಯ ಯೋಜನೆ ಇದಾಗಿದೆ.
ಈ ಯೋಜನೆಯನ್ನು ಮೂರು ಹಂತದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಮೊದಲನೆಯ ಹಂತದಲ್ಲಿ ತುಂಗಭದ್ರಾ ನದಿಯಿಂದ ಗದಗ ತಾಲೂಕಿನ ಪಾಪನಾಶಿ ಗ್ರಾಮದ ನೀರು ಸಂಗ್ರಹಣ ಟಕಕ್ಕೆ ನೀರು ಪೂರೈಕೆ.
ಎರಡನೇ ಹಂತದಲ್ಲಿ ನೀರು ಸಂಗ್ರಹಣ ಟಕದಿಂದ ಗದಗ ನಗರದ ಹೊರವಲಯದ ನೀರು ಸಂಸ್ಕರಣ ಟಕಕ್ಕೆ ನೀರು ಪೂರೈಕೆ.
ಮೂರನೇ ಹಂತದಲ್ಲಿ ನೀರು ಸಂಸ್ಕರಣ ಟಕದಿಂದ ಗದಗ ನಗರದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಆಗಿದೆ. ಗದಗ ನಗರದಲ್ಲಿ 16 ವಲಯಗಳನ್ನು ವಿಭಾಗಿಸಿ ಎಲ್ಲ ವಲಯಗಳಲ್ಲೂ ನೀರು ಪೂರೈಸುವುದಾಗಿದೆ.
ಈ ಮೇಲಿನ 16 ವಲಯಗಳಲ್ಲಿ ನೀರಿನ ಪೈಪ್ಲೈನ ಅಳವಡಿಸುವ ಕಾಮಗಾರಿ ಪೂರ್ಣಗೊಳ್ಳದೆ ಯೋಜನೆ ಉದ್ಘಾಟಿಸಲಾಗಿದೆ.
ಜತೆಗೆ, ಎರಡನೇ ಹಂತದ ಯೋಜನೆ ಅನುಷ್ಠಾನ ಸಂಪೂರ್ಣ ಕಳಪೆ ಆಗಿದೆ. ಡಿಪಿಆರ್ ನಲ್ಲಿ ಇರುವಂತೆ ನಿಧಿರ್ಷ್ಟ ಪ್ರಮಾಣದ ಮಿಲಿಮಿಟರ್ ಪೈಪ್ ಅಳವಡಿಸದ ಕಾರಣ ನೀರು ಹರಿಯುವ ಒತ್ತಡಕ್ಕೆ ನೀರಿನ ಪೈಪ್ ಒಡೆಯುತ್ತಿದೆ. ಇದೇ ರೀತಿ ಹಲವಡೆ ಪೈಪ ಒಡೆದು ನೀರು ಸೋರಿಕೆ ಆಗುತ್ತಿದೆ.
ಅದರಂತೆ, ಮೂರನೇ ಹಂತದಲ್ಲಿ ನಗರದಲ್ಲಿ 16 ವಲಯಗಳಲ್ಲಿನ ಕಾಮಗಾರಿಯೂ ಪೂರ್ಣಗೊಂಡಿಲ್ಲ.
ನಗರದಲ್ಲಿ ಅಂದಾಜು 2.30 ಲಕ್ಷ ಜನಸಂಖ್ಯೆ ಇದೆ. ಡಿಪಿಆರ್ ನಲ್ಲಿ ಇರುವಂತೆ ಪ್ರತಿನಿತ್ಯ 32 ಎಂಎಲ್ಡಿ ನೀರು ಅವಶ್ಯಕತೆ ಇದೆ. ಆದರೆ, ಯೋಜನೆ ಸಮಪರ್ಕ ಅನುಷ್ಠಾನಗೊಳ್ಳದ ಹಿನ್ನೆಲೆ ಪ್ರತಿನಿತ್ಯ 12 ರಿಂದ 15 ನೀರು ಮಾತ್ರ ಪೂರೈಕೆ ಆಗುತ್ತಿದೆ.
ಕೊರತೆಯ ನೀರು ಪೂರೈಕೆ ಆಗುತ್ತಿರುವುದರಿಂದ ಪ್ರತಿ ವಾರ್ಡಗೆ ಸರಾಸರಿ 15 ದಿನಗಳ ಅಂತರದಲ್ಲಿ ನಗರಸಭೆ ನೀರು ಪೂರೈಸುತ್ತಿದೆ. ಇದರಿಂದ ಜನರಿಗೆ ನೀರಿನ ಅಭಾವ ಸೃಷ್ಟಿ ಆಗುತ್ತಿದೆ.
ಅಪೂರ್ಣ ಕಾಮಗಾರಿಯನ್ನು ನಗರಸಭೆಯು ಹಸ್ತಾಂತರ ಪಡೆದುಕೊಂಡಿಲ್ಲ. ಹೀಗಿದ್ದರೂ ಆರಂಭದ ಹಲವು ವರ್ಷ ಗುತ್ತಿಗೆದಾರರೇ ನಿರ್ವಹಣೆ ಮಾಡಿದ್ದಾರೆ.
ಗುತ್ತಿಗೆದಾರರು ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಆರೋಪಿಸಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭೆಯಿಂದಲೇ ನಿರ್ವಹಣೆ ಮಾಡಿಕೊಳ್ಳಲು ಠರಾವು ಪಾಸು ಮಾಡಲಾಯಿತು. ಈಗ ನಗರಸಭೆಯೇ ಅಪೂರ್ಣ ಯೋಜನೆ ನಿರ್ವಹಣೆ ಮಾಡುತ್ತಿದೆ.