ಮುಂಡರಗಿಯ ಹೊರವಲಯದ ದ್ರಾಕ್ಷಿ ತೋಟದಲ್ಲಿ ಸೋಮವಾರ ಕೆಲಸಕ್ಕೆ ತೆರಳಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಪಲ್ಲವಿಯನ್ನು ಬಿಇಒ ಗಂಗಾಧರ ಅಣ್ಣಿಗೇರಿ ಅವರು ಮನವೊಲಿಸಿ ಪರೀಕ್ಷಾ ಕೇಂದ್ರಕ್ಕೆ ಕರೆತಂದರು. ಮನೋಹರ್ ಎಸ್., ಇತರರಿದ್ದರು.
- ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲು ಕೂಲಿಗೆ ಹೋಗಿದ್ದ ಬಾಲಕಿ
- ಪರೀಕ್ಷಾರ್ಥಿಗೆ ಧೈರ್ಯ ತುಂಬಿದ ಶಿಕ್ಷಣಾಧಿಕಾರಿ
ಮುಂಡರಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗದೇ ತೋಟವೊಂದರಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿ ಬಗ್ಗೆ ಮಾಹಿತಿ ಬಂದ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರು ಸೋಮವಾರ ಪಟ್ಟಣದ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷೆ ಬರೆಸಿದ್ದಾರೆ.
ತಾಲೂಕಿನ ಬರದೂರ ಸರ್ಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಪಲ್ಲವಿ ಹಳ್ಳಿಕೇರಿ, ಮಾ. 18ರಂದು ಕನ್ನಡ ವಿಷಯ ಪರೀಕ್ಷೆ ಬರೆದಿದ್ದಳು. ಆದರೆ, ಸೋಮವಾರ ವಿಜ್ಞಾನ ವಿಷಯದ ಪರೀಕ್ಷೆ ಬರೆಯದೆ ಪಟ್ಟಣದ ದ್ರಾಕ್ಷಿ ತೋಟವೊಂದರಲ್ಲಿ ಕೆಲಸಕ್ಕೆ ತೆರಳಿದ್ದಳು. ಆಕೆಯ ಗೆಳತಿಯರು ಮತ್ತು ಮುಖ್ಯಶಿಕ್ಷಕರಿಂದ ವಿಷಯ ತಿಳಿದ ಬಿಇಒ ಗಂಗಾಧರ ಅಣ್ಣಿಗೇರಿ ಅವರು ತೋಟಕ್ಕೆ ತೆರಳಿ ಪರೀಕ್ಷೆಗೆ ವಿದ್ಯಾರ್ಥಿನಿಯ ಮನವೊಲಿಸಿ ಇಲ್ಲಿನ ವಿ.ಜಿ. ಲಿಂಬಿಕಾಯಿ ಶಾಲೆ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಪರೀಕ್ಷೆ ಬರೆಸುವ ಕೆಲಸ ಮಾಡಿದರು.
ಪಲ್ಲವಿ ಶಾಲೆಯಲ್ಲಿ ಉತ್ತಮ ಅಭ್ಯಾಸದೊಂದಿಗೆ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾಗಿದ್ದಾಳೆ. ಆದರೆ, ಪಲ್ಲವಿ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಸರಿಯಾಗಿ ಓದಲು ಸಾಧ್ಯವಾಗಿರಲಿಲ್ಲ. ಹಾಗೆಯೇ ತಂದೆಗೆ ಚಿಕಿತ್ಸೆ ಕೊಡಿಸುವುದಕ್ಕೆ ಹಣದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಕುಟುಂಬಕ್ಕಾಗಿ ಪಾಲಕರೊಂದಿಗೆ ದುಡಿಮೆಗೆ ತೆರಳಿದ್ದಳು. ಇದರಿಂದಾಗಿ ಪರೀಕ್ಷೆಗೆ ಗೈರಾಗಿದ್ದಾಳೆ. ಕೊನೆಗೆ ಬಿಇಒ ಗಂಗಾಧರ ಅವರು ವಿದ್ಯಾರ್ಥಿನಿಗೆ ಧೈರ್ಯ ತುಂಬಿ ಪರೀಕ್ಷೆ ಬರೆಸುವ ಕೆಲಸ ಮಾಡಿದ್ದಾರೆ. ತಾಲೂಕು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಮನೋಹರ್ ಎಸ್., ಮುಖ್ಯಶಿಕ್ಷಕಿ ಮಲ್ಲಿಕಾ ನಾಯಕ ಶಿಕ್ಷಕ ಉಮೇಶ ಬೂದಿಹಾಳ, ಇತರರಿದ್ದರು.