COGRESS ನರಗುಂದದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡುತ್ತಿರುವುದು. 
ಗದಗ

COGRESS ಕಾಂಗ್ರೆಸ್- ಬಿಜೆಪಿ ಅಪವಿತ್ರ ಮೈತ್ರಿ, ಕೈಮಾಜಿ ಶಾಸಕ ಕಿಡಿ

ಪ್ರಮುಖ ಮುಖ್ಯಾಂಶಗಳು

  • ಬಿ.ಆರ್. ಯಾವಗಲ್ ಆರೋಪ
  • ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಬೆದರಿಕೆ
  • ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ
ನರಗುಂದ: ಜಿಲ್ಲಾ ಉಸ್ತುವಾರಿ ಸಚಿವರಿಂದ ಬಿಜೆಪಿಯವರೊಂದಿಗೆ ಅಪವಿತ್ರವಾದ ರಾಜಕೀಯ ಹೊಂದಾಣಿಕೆ ನಡೆಯುತ್ತಿದೆ. ಇದು ತೊಲಗದಿದ್ದರೆ ಮತಕ್ಷೇತ್ರದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಬೇಸರ ವ್ಯಕ್ತಪಡಿಸಿದರು. 
ಪಟ್ಟಣದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ವಿಚಿತ್ರ ವಾತಾವರಣ ಸೃಷ್ಟಿಯಾಗಿದೆ. ಇಲ್ಲಿ ಯಾವ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ ಎಂಬುದು ತಿಳಿಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗಿಂತ ಮೊದಲೇ ನಾನು 5 ಬಾರಿ ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಆದರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ನನಗೆ ಮರ್ಯಾದೆ ಇಲ್ಲದಂತಾಗಿದೆ. ಶಾಸಕ ಸಿ.ಸಿ. ಪಾಟೀಲ ಅವರು ಕೇವಲ ಆಮಂತ್ರಣ ಪತ್ರಿಕೆ ವಿಚಾರವಾಗಿ ರಾಜಕಾರಣ ಮಾಡುತ್ತಾರೆ. ಆದರೆ, ಅದೇ ಪಕ್ಷದ ರಾಜಕೀಯ ಮುಖಂಡರು, ಕಾರ್ಯಕರ್ತರು, ಶಾಸಕರೊಂದಿಗೆ ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಹೊಂದಾಣಿಕೆ ರಾಜಕಾರಣ ಮಾಡುತ್ತ ನಮ್ಮನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿರುವುದು ತೀವ್ರ ಬೇಸರ ತರಿಸಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿರುವುದರಿಂದ ಸಚಿವರು ನಮ್ಮ ಪಕ್ಷದವರನ್ನು ಬೆಂಬಲಿಸಬೇಕು. ಆದರೆ, ನರಗುಂದ ಮತಕ್ಷೇತ್ರದ ಯಾವುದೇ ಸಭೆ, ಸಮಾರಂಭ, ಸರ್ಕಾರದ ಮಹತ್ವದ ಕಾರ್ಯಕ್ರಮಗಳಲ್ಲಿ ನಮ್ಮನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ. ನಿಯಮ ಬಾಹಿರವಾಗಿ ಹೊಂದಾಣಿಕೆ ಮುಂದುವರಿದರೆ ಕೆಪಿಸಿಸಿ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ದೂರು ನೀಡುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಸಿ.ಸಿ. ಪಾಟೀಲ ಅವರು ಕೇವಲ ರಾಜಕೀಯಕ್ಕೋಸ್ಕರ ಅಪೂರ್ಣಗೊಂಡಿರುವ ಪುರಸಭೆಯ ನೂತನ ಕಾರ್ಯಾಲಯ, ಹೈಟೆಕ್ ತರಕಾರಿ ಮಾರುಕಟ್ಟೆಯನ್ನು ಶುಕ್ರವಾರ ಉದ್ಘಾಟಿಸಿದ್ದಾರೆ. 2017ರಲ್ಲಿ ನಾನು ಶಾಸಕನಾಗಿದ್ದಾಗ ನೂತನ ಪುರಸಭೆ ಕಟ್ಟಡ ನಿರ್ಮಾಣಕ್ಕೆ ಹಳೆಯ ತಹಸೀಲ್ದಾರ್ ಕಚೇರಿಯನ್ನು ಕಂದಾಯ ಇಲಾಖೆಯಿಂದ ಉಚಿತವಾಗಿ ಕೊಡಿಸಿದ್ದೇನೆ. 3 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಪೌರಾಡಳಿತ ಇಲಾಖೆಯಿಂದ 1 ಕೋಟಿ, ಎಸ್‌ಎಫ್‌ಸಿಯ 1.70 ಕೋಟಿ ರೂ. ಸೇರಿ ಒಟ್ಟು 2.70 ಕೋಟಿ ರೂ. ಅನುದಾನ ಕೊಡಿಸಿದ್ದೇನೆ. ಆದರೆ, ಈ ಮಹತ್ವದ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿ.ಸಿ. ಪಾಟೀಲ ತರಕಾರು ಮಾಡಿದರು. ಗುತ್ತಿಗೆದಾರನಿಗೆ ಕಿರುಕುಳ ನೀಡಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಬಾಬಾಸಾಹೇಬ ಅರಮನೆಯಿಂದ ಪುರಸಭೆ ಸ್ಥಳಾಂತರ ಮಾಡಬಾರದೆಂದು ಪತ್ರಿಕಾಗೋಷ್ಠಿ ನಡೆಸಿದ್ದರು. 2018 ರಿಂದ ಇಲ್ಲಿಯವರೆಗೆ ಶಾಸಕ, ಸಚಿವರಾಗಿ ಅಧಿಕಾರದಲ್ಲಿದ್ದರೂ ಈ ಕಟ್ಟಡ ನಿರ್ಮಾಣಕ್ಕೆ ಆಸಕ್ತಿ ತೋರಿರಲಿಲ್ಲ. ಈ ಕುರಿತು ನಾನು ನಿರಂತರ ಒತ್ತಡ ಹೇರಿದ್ದರಿಂದ 8 ವರ್ಷದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಪೂರ್ಣ ಕಟ್ಟಡ ಉದ್ಘಾಟನೆ ಮಾಡಿಸಿದ್ದಾರೆ. 3 ಅಂತಸ್ತಿನ ಕಟ್ಟಡ ನಿರ್ಮಾಣದ ಬದಲು ಕೇವಲ ಎರಡು ಅಂತಸ್ತಿನ ಅರ್ದಂಬರ್ದ ಕಟ್ಟಡ ನಿರ್ಮಿಸಿದ್ದಾರೆ. ಒಂದಂತಸ್ತಿನ ಕಟ್ಟಡ ನಿರ್ಮಾಣದ ಅನುದಾನ ಎಲ್ಲಿ ಹೋಯ್ತು ಎಂದು ಶಾಸಕ ಸಿ.ಸಿ. ಪಾಟೀಲರನ್ನು ಪ್ರಶ್ನಿಸಿದರು. 
ನಾನು ಜಿಟಿಟಿಸಿ ಕಾಲೇಜ್ ತಂದು ಆಶ್ರಯ ಮನೆಗಳ ನಿರ್ಮಾಣಕ್ಕೆ 110 ಕೋಟಿ ರೂ. ಕೊಟ್ಟಿದ್ದೇನೆ. ಆದರೆ, ಈವರೆಗೆ ಬಡವರಿಗೆ ಒಂದೇ ಒಂದು ಮನೆ ವಿತರಿಸಿಲ್ಲ. ಪೂರ್ಣಪ್ರಮಾಣದ ಕಾಲೇಜ್ ನಡೆಸುತ್ತಿಲ್ಲ. ಏತ ನೀರಾವರಿ ಯೋಜನೆಗಳ ಕಬ್ಬಿಣದ ಪೈಪ್‌ಲೈನ್ ಜೋಡಿಸಲು 80 ಕೋಟಿ ರೂ. ಅನುದಾನ ತಂದಿರುವುದಾಗಿ ಸಿ.ಸಿ. ಪಾಟೀಲ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಈ ಕಾಮಗಾರಿ ಇದುವರೆಗೆ ಪ್ರಾರಂಭಗೊಳಿಸಿಲ್ಲ. 10 ವರ್ಷದಲ್ಲಿ 1800 ಕೋಟಿ ರೂ. ಗಳ ಅಭಿವೃದ್ಧಿ ಮಾಡಿದ್ದರೆ ಸಿ.ಸಿ. ಪಾಟೀಲ ಅದರ ಲೆಕ್ಕ ತೋರಿಸಲಿ ಎಂದು ಸವಾಲು ಹಾಕಿದರು.