ಗಜೇಂದ್ರಗಡ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಆಯುಷ್ಮಾನ್ ayushman ಆರೋಗ್ಯ ಕೇಂದ್ರವನ್ನು ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸಿದರು.
ಗಜೇಂದ್ರಗಡ: ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಸಕಾಲದಲ್ಲಿ ಸಿಗಲು ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಶ್ರಮ ಶ್ಲಾಘನೀಯ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಆಯುಷ್ಮಾನ್ ಯೋಜನೆಯ 61 ಲಕ್ಷ ರೂ.ಅನುದಾನದಲ್ಲಿ ನಿರ್ಮಿಸಿರುವ ಆಯುಷ್ಮಾನ್ Ayushman ಆರೋಗ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರು ಸರ್ಕಾರಿ ಆಸ್ಪತ್ರೆ ಬಂದಾಗ ಅವರಿಗೆ ಸೂಕ್ತ ಹಾಗೂ ಅಗತ್ಯ ಚಿಕಿತ್ಸೆ ಸಿಗಬೇಕು. ಈ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು ಶ್ರಮಿಸಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗುವಂತಾಗುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಆಯುಷ್ಮಾನ್ ಆರೋಗ್ಯಕೇಂದ್ರದ ಮೂಲಕ ಸಾಮಾನ್ಯ ತಪಾಸಣೆ, ತಾಯಿ ಮಗು ಆರೈಕೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಸೇವೆಗಳು ಗ್ರಾಮದಲ್ಲೇ ಲಭ್ಯವಾಗಲಿವೆ ಎಂದರು.
ಡಾ.ಬಿ.ಎಸ್.ಭಜಂತ್ರಿ ಮಾತನಾಡಿ, ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ನನ್ನ ಆಶಯ.
ಸೇವೆ ಸಲ್ಲಿಸಿದ ಕಡೆಗಳಲ್ಲಿ ರೋಗಿಗಳಿಗೆ ಕೈಲಾದಷ್ಟು ಉತ್ತಮ ಸೇವೆ ಮಾಡಿದ್ದೇನೆ. ಇಲ್ಲೂ ಉತ್ತಮ ಸೇವೆ ದೊರಕಿಸಲು ಪ್ರಯತ್ನ ಮಾಡುತ್ತೇನೆ. ಯಾವುದೇ ಸಮಸ್ಯೆಗಳಿದ್ದರೂ ರೋಗಿಗಳು ನೇರ ಸಂಪರ್ಕ ಮಾಡಬಹುದು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ, ಡಾ. ಕೆ.ಎ. ಹಾದಿಮನಿ, ಡಾ.ಚಿದಾನಂದ ಮುಂಡಾಸದ, ಪಡಿಯಪ್ಪ ಮಾದರ, ಶಿವರಾಜ ಘೋರ್ಪಡೆ, ಅಶೋಕ ಬಾಗಮಾರ, ವಿ.ಬಿ. ಸೋಮನಕಟ್ಟಿಮಠ, ಚಂಬಣ್ಣ ಚವಡಿ, ಎಚ್.ಎಸ್. ಸೊಂಪೂರ,ಇತರರು ಇದ್ದರು.