ಮಕ್ತುಂಹುಸೇನ ಕರಡಿಗುಡ್ಡ  
ಗದಗ

ಅಸೂಟಿ ಪಿಡಿಒ ಆತ್ಮಹತ್ಯೆ

ರೋಣ: ತಾಲೂಕಿನ ಅಸೂಟಿ ಹಾಗೂ ಕೊತಬಾಳದಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಕ್ತುಂಹುಸೇನ ಕರಡಿಗುಡ್ಡ ( 46) ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದು, ಗುರುವಾರ ಪ್ರಕರಣ ಬೆಳಕಿಗೆ ಬಂದಿದೆ.
ಪಟ್ಟಣದ ಶ್ರೀನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪಿಡಿಒ ಅವರು, ಕಳೆದ ತಿಂಗಳಷ್ಟೇ ಕೊತಬಾಳದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಸೋಮವಾರ ಬೆಂಗಳೂರಿಗೆ ತೆರಳಿದ್ದು, ಮಂಗಳವಾರದಿಂದ ಪತ್ನಿ, ಕುಟುಂಬದ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮೇಲಿಂದ ಮೇಲೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಪತ್ನಿ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಮನೆ ಮಾಲೀಕರು ಬಂದು ನೋಡಿದಾಗ ಪಿಡಿಒ ಕರಡಿಗುಡ್ಡ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದಿದೆ. ಅವರಿಗೆ ಪತ್ನಿ ಹಾಗೂ ಮೂವರು ಪುತ್ರರಿದ್ದಾರೆ. ಮಕ್ತುಂಹುಸೇನ ಬರೆದ ಚೀಟಿಯೊಂದು ಅವರ ಪ್ಯಾಂಟಿನ ಜೇಬಿನಲ್ಲಿ ಸಿಕ್ಕಿದೆ. 
ಘಟನೆ ಹಿನ್ನೆಲೆ: 
ಮೂಲತಃ ಧಾರವಾಡದವರಾದ ಮಕ್ತುಂಹುಸೇನ ಕರಡಿಗುಡ್ಡ ಅವರಿಗೆ ಅಪಘಾತವಾಗಿ ಬಲಗಾಲಗೆ ಗಂಭೀರ ಗಾಯವಾಗಿತ್ತು. ಇದರಿಂದ ಅನಾರೋಗ್ಯಕ್ಕೊಳಗಾಗಿ ತುಂಬಾ ಬಳಲುತ್ತಿದ್ದರು. ಆದರೆ, ಬೆಂಗಳೂರಿಗೆ ತೆರಳಿದ್ದು ಏಕೆ, ಯಾರನ್ನು ಭೇಟಿ ಮಾಡಲು ತೆರಳಿದ್ದರು ಎಂಬುದು ಯಾರಿಗೂ ತಿಳಿಯದಾಗಿದೆ. ನನ್ನ ಪತಿಯ ಸಾವಿನ ಬಗ್ಗೆ ಸಂಶಯವಿದೆ. ಹೀಗಾಗಿ ತನಿಖೆ ನಡೆಸಬೇಕು ಎಂದು ಮಕ್ತುಂಹುಸೇನ ಪತ್ನಿ ಆಸ್ಮಾಬಾನು ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್‌ಐ ಪ್ರಕಾಶ ಬಣಕಾರ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.